ಚಂಡೀಗಢ(ಪಂಜಾಬ್): ಎಎಪಿ ಮುಖ್ಯಸ್ಥ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಪಂಜಾಬ್ ಸರ್ಕಾರವು ಝಡ್ ಪ್ಲಸ್ ಭದ್ರತೆ ನೀಡಿದೆ ಎಂದು ಕಾಂಗ್ರೆಸ್ ಶಾಸಕ ಸುಖಪಾಲ್ ಸಿಂಗ್ ಖೈರಾ ಹೇಳಿದ್ದು, ಈ ಭದ್ರತೆ ಹಿಂಪಡೆಯಬೇಕೆಂದು ಒತ್ತಾಯಿಸಿದ್ದಾರೆ. ಈಗಾಗಲೇ ಅವರಿಗೆ ಕೇಂದ್ರ ಸರ್ಕಾರ Z+ ಭದ್ರತೆ ನೀಡಿದ್ದು ರಾಜ್ಯದಲ್ಲೂ ವಿಶೇಷ ಭದ್ರತೆ ವಿಸ್ತರಿಸುವ ಅಗತ್ಯವೇನೆಂದು ಅವರು ಕೇಳಿದ್ದಾರೆ.
ಅಖಿಲ ಭಾರತ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಖೈರಾ Z+ ಭದ್ರತೆ ಹೊಂದಿರುವ ವ್ಯಕ್ತಿಗಳ ಪಟ್ಟಿ ಉಲ್ಲೇಖಿಸಿ ಈ ಆರೋಪ ಮಾಡಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪಂಜಾಬ್ ಮುಖ್ಯಮಂತ್ರಿಯ ಅಧಿಕೃತ ನಿವಾಸವಾದ ದೆಹಲಿಯ ಕಪುರ್ತಲಾ ಹೌಸ್‌ನಲ್ಲಿ ಪಂಜಾಬ್ ಪೊಲೀಸ್ ಕಮಾಂಡೋಗಳನ್ನು ನಿಯೋಜಿಸಲಾಗಿದೆ. ಎಎಪಿ ರಾಷ್ಟ್ರೀಯ ಸಂಚಾಲಕರಿಗೆ ರಾಜ್ಯ ಸರ್ಕಾರ ನೀಡಿರುವ ಭದ್ರತೆಯನ್ನು ಮುಖ್ಯಮಂತ್ರಿ ಭಗವಂತ್ ಮಾನ್ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಖೈರಾ ನೀಡಿರುವ ದಾಖಲೆಗಳು ಯಾವುದೇ ರೀತಿಯಲ್ಲಿಯೂ ಪಂಜಾಬ್ ಪೊಲೀಸರ ಅಧಿಕೃತ ದಾಖಲೆಗಳಲ್ಲ ಎಂದು ಪೊಲೀಸ್ ವಕ್ತಾರರು ಪ್ರತಿಕ್ರಿಯಿಸಿದ್ದಾರೆ. ಪಂಜಾಬ್ ಸರ್ಕಾರ ಈ ಕುರಿತು ಪ್ರತಿಕ್ರಿಯಿಸಿಲ್ಲ.
ಇದನ್ನೂ ಓದಿ: ಒಂದು ಹಣ್ಣಿಗೆ ಲಕ್ಷಗಟ್ಟಲೇ ಬೆಲೆ.. Z PLUS ಭದ್ರತೆಯ ನಡುವೆಯೂ ಮಾವಿನ ಹಣ್ಣುಗಳ ಕಳ್ಳತನ!