ಫತೇಘರ್ ಸಾಹಿಬ್, ಪಂಜಾಬ್: ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿರುವುದು ಬೆಳಕಿಗೆ ಬಂದಿದೆ. ಉದ್ಯಮಿಯೊಬ್ಬ ತನ್ನ ಸಹಚರರೊಂದಿಗೆ ಸೇರಿ ತನ್ನ ಸಾವನ್ನು ಸುಳ್ಳಾಗಿ ಸೃಷ್ಟಿಸಿ, ಗಣನೀಯ ವಿಮಾ ಪಾವತಿಯನ್ನು ಪಡೆಯಲು ಸ್ನೇಹಿತನನ್ನು ಕೊಲೆ ಮಾಡಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಈ ಕೊಲೆ ಪ್ರಕರಣವನ್ನು ಬೇಧಿಸಿದ ಹಿರಿಯ ಪೊಲೀಸ್ ಅಧಿಕಾರಿ ರಾವ್ಜೋತ್ ಕೌರ್ ಗ್ರೆವಾಲ್ ನೇತೃತ್ವದ ಪೊಲೀಸ್ ತಂಡ ಆರು ಜನ ಆರೋಪಿಗಳನ್ನು ಬಂಧಿಸಿದೆ.
ಪೊಲೀಸರ ಹೇಳಿಕೆ ಪ್ರಕಾರ, ಸಾನಿಪುರದ ರಾಮದಾಸ್ ನಗರದ ನಿವಾಸಿ ಗುರುಪ್ರೀತ್ ಸಿಂಗ್ ಒಬ್ಬ ಉದ್ಯಮಿ. ಗುರುಪ್ರೀತ್ ತಮ್ಮ ಹೆಸರಲ್ಲಿ ನಾಲ್ಕು ಕೋಟಿ ವಿಮೆ ಮಾಡಿಸಿದ್ದರು. ಉದ್ಯಮದಲ್ಲಿ ನಷ್ಟ, ಹೆಚ್ಚಾಗಿ ಸಾಲ ಮಾಡಿಕೊಂಡಿದ್ದರಿಂದ ಚಿಂತೆಗೀಡಾಗಿದ್ದರು. ಇದರಿಂದಾಗಿ ತನ್ನ ಹೆಸರಿನಲ್ಲಿ ಇರುವ ವಿಮೆ ಹಣ ಪಡೆಯಲು ಏನು ಮಾಡಬೇಕೆಂದು ಆಲೋಚಿಸಿ, ಕಳ್ಳ ಮಾರ್ಗ ಹಿಡಿದು ಸಿಕ್ಕಿಬಿದ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಮೆ ಪಾಲಿಸಿದಾತನ ಭೇಟಿ, ಗುಂಪು ರಚನೆ: ಫತೇಘರ್ ಸಾಹಿಬ್ ನ್ಯಾಯಾಲಯದಲ್ಲಿ ಫೋಟೋಸ್ಟಾಟ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ ಸ್ನೇಹಿತ ಮತ್ತು ಇನ್ಶೂರೆನ್ಸ್ ಪಾಲಿಸಿಗಳ ಅನಧಿಕೃತ ಹ್ಯಾಂಡ್ಲರ್ ರಾಜೇಶ್ ಕುಮಾರ್ ಶರ್ಮಾ ಅವರನ್ನು ಗುರುಪ್ರೀತ್ ಸಿಂಗ್ ಭೇಟಿ ಆಗಿ ವಿಮೆ ಹಣ ಪಡೆಯುವ ಬಗ್ಗೆ ಕಳ್ಳ ಮಾರ್ಗ ರಚಿಸಿಕೊಂಡಿದ್ದರು. ನಂತರ ಗುರುಪ್ರೀತ್ ಸಿಂಗ್ಗೆ ಪತ್ನಿ ಖುಷ್ದೀಪ್ ಕೌರ್ ಸಾಥ್ ನೀಡಿದ್ದು, ಸ್ನೇಹಿತ ಸುಖ್ವಿಂದರ್ ಸಿಂಗ್ ಸಂಘ ಜೊತೆ ಸೇರಿ ಆರು ಜನರ ಗುಂಪೊಂದು ರಚಿಸಿಕೊಂಡಿದ್ದರು. ಗುಂಪಿನ ಸದಸ್ಯರಿಗೆ ವಿಮೆ ಬಂದ ಹಣದಲ್ಲಿ ಶೇ 50ರಷ್ಟು ಮೊತ್ತವನ್ನು ಹಂಚುವುದಾಗಿ ಗುರುಪ್ರೀತ್ ಸಿಂಗ್ ಭರವಸೆ ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ಲ್ಯಾನ್ ಏನು?: ಆತ್ಮಹತ್ಯೆ ಹೊರತು ಪಡಿಸಿ ಅಪಘಾತ ಅಥವಾ ಇನ್ನಿತರ ಸನ್ನಿವೇಶಗಳಲ್ಲಿ ಗುರುಪ್ರೀತ್ ಸಿಂಗ್ ಮೃತಪಟ್ಟಿದ್ದಾನೆ ಎಂದು ನಂಬಿಸಬೇಕು. ಆತನ ಬದಲು ಮತ್ತೊಬ್ಬ ವ್ಯಕ್ತಿಯನ್ನು ಕೊಂದು ಗುರುತು ಸಿಗದಂತೆ ಆ ದೇಹವನ್ನು ವಿರೂಪಗೊಳಿಸಬೇಕು. ಬಳಿಕ ಗುರುಪ್ರೀತ್ ಸಿಂಗ್ ಪತ್ನಿ ಖುಷ್ದೀಪ್ ಸಿಂಗ್ ಮೃತಪಟ್ಟ ವ್ಯಕ್ತಿಯ ದೇಹವನ್ನು ನನ್ನ ಗಂಡ ಅಂತ ಹೇಳಿ ಗುರುತಿಸುತ್ತಾಳೆ. ಬಳಿಕ ಇನ್ಶೂರೆನ್ಸ್ ಪಾಲಿಸಿಗಳ ಅನಧಿಕೃತ ಹ್ಯಾಂಡ್ಲರ್ ರಾಜೇಶ್ ನನ್ನ ಹೆಸರಲ್ಲಿದ್ದ ವಿಮೆ ಹಣವನ್ನು ನಮಗೆ ದೊರೆಯುವಂತೆ ಮಾಡುತ್ತಾರೆ. ಬಂದ ಹಣದಲ್ಲಿ ಶೇಕಡ 50ರಷ್ಟು ಹಣ ತಾವೂ ಇಟ್ಟಿಕೊಳ್ಳುವುದಾಗಿ ಮತ್ತು ಇನ್ನುಳಿದ 50ರಷ್ಟು ಹಣ ಉಳಿದ ಸದಸ್ಯರು ಹಂಚಿಕೊಳ್ಳುವುದಾಗಿ ಯೋಜನೆ ರೂಪಿಸಲಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸ್ನೇಹಿತನ ಕೊಲೆಗೆ ಸಂಚು: ಇನ್ನು ಗುರುಪ್ರೀತ್ ಸಿಂಗ್ಗೆ ತನ್ನ ಯೋಜನೆಯನ್ನು ಸಕ್ರಿಯಗೊಳಿಸುವುದಕ್ಕೆ ಕೊಲೆ ಮಾಡಲು ವ್ಯಕ್ತಿಯೊಬ್ಬನನ್ನು ಆಯ್ಕೆ ಮಾಡಿಕೊಳ್ಳಬೇಕಾಗಿತ್ತು. ಅಷ್ಟೇ ಅಲ್ಲ ತನ್ನಂತೆ ಮೈಕಟ್ಟು ಹೊಂದಿದ್ದ ವ್ಯಕ್ತಿಯ ಜೊತೆ ಗುರುಪ್ರೀತ್ ಸಿಂಗ್ ಸ್ನೇಹ ಬೆಳೆಸಬೇಕಾಗಿತ್ತು. ತನ್ನ ಪ್ಲ್ಯಾನ್ ಪ್ರಕಾರ ಸುಖಜಿತ್ ಎಂಬ ವ್ಯಕ್ತಿಯೊಂದಿಗೆ ಗುರುಪ್ರೀತ್ ಸಿಂಗ್ ಸ್ನೇಹ ಗಳಿಸಿದ್ದಾನೆ. ಬಳಿಕ ಆತನಿಗೆ ದಿನನಿತ್ಯ ಕುಡಿಯಲು ಹಣ ನೀಡುತ್ತಿದ್ದನು. ಜೂನ್ 19 ರಂದು ಗುರುಪ್ರೀತ್ ಸಿಂಗ್, ಅವರ ಪತ್ನಿ ಖುಷ್ದೀಪ್ ಕೌರ್, ಸ್ನೇಹಿತ ಸುಖ್ವಿಂದರ್ ಸಿಂಗ್ ಸಂಘ ಒಟ್ಟಿಗೆ ಸೇರಿ ಸುಖಜೀತ್ ಸಿಂಗ್ಗೆ ಕಂಠಪೂರ್ತಿ ಕುಡಿಸಿದ್ದಾರೆ. ನಂತರ ಮಾರ್ಫಿನ್ ಔಷಧದ ಡೋಸ್ (30mg) ನೀಡಿ ಮೂರ್ಛೆಗೊಳಿಸಿದ್ದಾರೆ.
ವಿಮೆ ಹಣ ಪಡೆದ ಆರೋಪಿಗಳು: ಇನ್ನು ಜೂನ್ 20 ರಂದು ಮೂರ್ಛೆಯಲ್ಲಿದ್ದ ಸುಖಜೀತ್ನನ್ನು ಕಾರಿನಲ್ಲಿ ರಾಜಪುರಕ್ಕೆ ಕರೆದೊಯ್ದಿದ್ದಾರೆ. ಸುಖಜಿತ್ ಸಿಂಗ್ ಅವರನ್ನು ಕಾರಿನಿಂದ ಹೊರತಂದು ಟ್ರಕ್‌ನ ಹಿಂದಿನ ಟೈರ್‌ಗಳ ಮುಂದೆ ಇರಿಸಿದ್ದಾರೆ. ಬಳಿಕ ಆರೋಪಿ ಜಸ್ಪಾಲ್ ಸಿಂಗ್ ಅವರು ಸುಖಜಿತ್ ಸಿಂಗ್ ಅವರ ತಲೆ ಮತ್ತು ಮುಖದ ಮೇಲೆ ಟ್ರಕ್‌ನಿಂದ ಎರಡು ಬಾರಿ ಹರಿಸಿ ದೇಹವನ್ನು ವಿರೂಪಗೊಳಿಸಿದ್ದಾರೆ. ಬಳಿಕ ಗುರುಪ್ರೀತ್ ಸಿಂಗ್ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಬಿಂಬಿಸಲಾಗಿತ್ತು. ಈ ಕುರಿತು ರಾಜಪುರ ಪೊಲೀಸ್ ಠಾಣೆಯಲ್ಲಿ ಅಪಘಾತ ಪ್ರಕರಣ ದಾಖಲಿಸಲಾಗಿತ್ತು. ತನಿಖೆ ವೇಳೆ ಮತ್ತು ಸ್ಥಳೀಯ ಆಧಾರಗಳನ್ನು ಆಧಾರಿಸಿ ಈ ಶವವನ್ನು ಪೊಲೀಸರು ಗುರುಪ್ರೀತ್ ಸಿಂಗ್ ಅವರದು ಎಂದು ಗುರುತಿಸಿದ್ದರು. ಬಳಿಕ ರಸ್ತೆ ಅಪಘಾತದಲ್ಲಿ ಗುರುಪ್ರೀತ್ ಸಾವನ್ನಪ್ಪಿದ್ದಾನೆ ಎಂದು ಆತನ ಪತ್ನಿ ಖುಷ್ದೀಪ್ ಸಿಂಗ್ಗೆ ಪೊಲೀಸರು ತಿಳಿಸಿದ್ದಾರೆ. ವಿರೂಪಗೊಂಡ ಶವವನ್ನು ಪತ್ನಿ ಖುಷ್ದೀಪ್ ಕೌರ್ ಗುರುತಿಸಿ ಇದು ನನ್ನ ಪತಿ ಗುರುಪ್ರೀತ್ ಅಂತಾ ಪೊಲೀಸರಿಗೆ ಹೇಳಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಆ ಮೃತದೇಹವನ್ನು ಅಂತ್ಯ ಸಂಸ್ಕಾರ ನೇರವೇರಿಸಲಾಗಿತ್ತು. ಪ್ಲ್ಯಾನ್ ಪ್ರಕಾರವೇ ಎಲ್ಲವೂ ನಡೆದಿದ್ದು, ನಾಲ್ಕು ಕೋಟಿ ಹಣವೂ ಸಹ ಖುಷ್ದೀಪ್ ಸಿಂಗ್ಗೆ ಕೈ ಸೇರಿತ್ತು. ಅಂದುಕೊಂಡಂತೆ ಎಲ್ಲರೂ ತಮ್ಮ ಪಾಲುಗಳನ್ನು ತೆಗೆದುಕೊಂಡು ಸುಖ ಜೀವನ ನಡೆಸುತ್ತಿದ್ದರು.
ಸುಖಜೀತ್ ಪತ್ನಿಯಿಂದ ದೂರು: ಸಂತ್ರಸ್ತೆ ಸುಖಜೀತ್ ಸಿಂಗ್ ಅವರ ಪತ್ನಿ ಜೀವನ್‌ದೀಪ್ ಕೌರ್ ಅವರು ನಾಪತ್ತೆಯಾಗಿರುವ ತನ್ನ ಗಂಡನ ಬಗ್ಗೆ ಪೊಲೀಸರಿಗೆ ದೂರು ನೀಡಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಗುರುಪ್ರೀತ್ ಸಿಂಗ್ ಜೊತೆ ಸುಖಜೀತ್ ಸಿಂಗ್ ಸ್ನೇಹ ಬೆಳಸಿರುವುದು ತನಿಖೆ ಮೂಲಕ ತಿಳಿದಿತ್ತು. ಗುರುಪ್ರೀತ್ ಕುಟುಂಬದ ಮೇಲೆ ಅನುಮಾನ ವ್ಯಕ್ತಪಡಿಸಿ ಅಧಿಕಾರಿಗಳು ಆರಂಭಿಸಿದ ತನಿಖೆ ಅನಿರೀಕ್ಷಿತ ತಿರುವು ಪಡೆದುಕೊಂಡಿತು. ತನ್ನ ವ್ಯವಹಾರದಲ್ಲಿನ ಆರ್ಥಿಕ ನಷ್ಟದಿಂದಾಗಿ ಗುರುಪ್ರೀತ್, ಆತನ ಪತ್ನಿ ಮತ್ತು ಸುಖ್ವಿಂದರ್ ಸಿಂಗ್ ಸಂಘ, ಜಸ್ಪಾಲ್ ಸಿಂಗ್, ದಿನೇಶ್ ಕುಮಾರ್ ಮತ್ತು ರಾಜೇಶ್ ಕುಮಾರ್ ಎಂಬ ನಾಲ್ವರು ಸಹಚರರೊಂದಿಗೆ ಸುಖ್‌ಜೀತ್‌ನ ಸಾವಿಗೆ ಸಂಚು ರೂಪಿಸಿದ್ದರು. ಬಳಿಕ 4 ಕೋಟಿ ರೂಪಾಯಿಯ ವಿಮಾ ಮೊತ್ತವನ್ನು ಕ್ಲೈಮ್ ಮಾಡಲು ಪ್ಲ್ಯಾನ್ ಹಾಕಿದ್ದರು ಎಂಬುದು ತನಿಖೆ ಮೂಲಕ ತಿಳಿದುಬಂದಿದೆ ಅಂತಾ ಎಸ್ಪಿ ರಾವ್ಜೋತ್ ಕೌರ್ ಗ್ರೆವಾಲ್ ಹೇಳಿದ್ದಾರೆ.
ಬಲವಾದ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದ ಫತೇಘರ್ ಸಾಹಿಬ್ ಪೊಲೀಸರು ಗುರ್‌ಪ್ರೀತ್ ಸಿಂಗ್, ಅವರ ಪತ್ನಿ ಖುಷ್ದೀಪ್ ಕೌರ್ ಮತ್ತು ಸುಖ್ವಿಂದರ್ ಸಿಂಗ್ ಸಂಘವನ್ನು ಕೊಲೆಯ ಆರೋಪದಲ್ಲಿ ಬಂಧಿಸಿದ್ದಾರೆ. ಹೆಚ್ಚುವರಿಯಾಗಿ, ಅಪರಾಧವನ್ನು ಸುಗಮಗೊಳಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಜಸ್ಪಾಲ್ ಸಿಂಗ್, ದಿನೇಶ್ ಕುಮಾರ್ ಮತ್ತು ರಾಜೇಶ್ ಕುಮಾರ್ ಅವರನ್ನು ಸಹ ಬಂಧಿಸಿ ಜೈಲಿಗೆ ತಳ್ಳಲಾಗಿದೆ.