ಚಿತ್ತೂರು(ಕಡಪ): ಚಿತ್ತೂರು ಜಿಲ್ಲೆಯ ಅಂಗಲ್ಲು ಮತ್ತು ಪುಂಗನೂರು ಕ್ಷೇತ್ರಗಳಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ತೆಲುಗು ದೇಶಂ ಪಕ್ಷ(ಟಿಡಿಪಿ) ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಯಾತ್ರೆಯನ್ನು ತಡೆಯಲು ಯುವಜನ ಶ್ರಮಿಕ ರೈತ ಕಾಂಗ್ರೆಸ್ ಪಕ್ಷ(ವೈಎಸ್‌ಆರ್‌ಸಿ) ಮುಖಂಡರು, ಕಾರ್ಯಕರ್ತರು ಮತ್ತು ಪೊಲೀಸರು ವಿಫಲ ಯತ್ನ ನಡೆಸಿದರು.
ಈ ಎರಡೂ ಪ್ರದೇಶಗಳಲ್ಲಿ ನಿನ್ನೆ(ಶುಕ್ರವಾರ) ಬೆಳಗ್ಗೆಯಿಂದಲೇ ವೈಎಸ್‌ಆರ್‌ಸಿಪಿ ಮುಖಂಡರು ಹಾಗೂ ಕಾರ್ಯಕರ್ತರು ಪ್ರಚೋದನಕಾರಿ ಕೃತ್ಯಗಳಲ್ಲಿ ತೊಡಗಿದ್ದರು. ಇದು ಟಿಡಿಪಿಯ ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ. ಆಡಳಿತ ಪಕ್ಷದ ಬಗ್ಗೆ ಪೊಲೀಸರು ನಿರ್ಲಕ್ಷ ತೋರಿದ್ದು, ತೀವ್ರ ಉದ್ವಿಗ್ನತೆ ಹಾಗೂ ಘರ್ಷಣೆಗೆ ಕಾರಣವಾಗಿದೆ ಎನ್ನಲಾಗಿದೆ.
ಚಂದ್ರಬಾಬು ನಾಯ್ಡು ಅವರ ಅಂಗಲ್ಲು ಭೇಟಿಗೆ ಅಡ್ಡಿಪಡಿಸಲು ವೈಎಸ್‌ಆರ್‌ಸಿಪಿ ಯತ್ನ ನಡೆಸಿದೆ. ಟಿಡಿಇ ಧ್ವಜಗಳನ್ನು ಹರಿದು ಪಕ್ಷದ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಲಾಯಿತು. ಟಿಡಿಪಿ ಕಾರ್ಯಕರ್ತರು ತಾಳ್ಮೆ ಕಳೆದುಕೊಂಡು ಅವರ ವಿರುದ್ಧ ತಿರುಗಿ ಬಿದ್ದರು. ಪರಸ್ಪರ ಕಲ್ಲು ತೂರಾಟದಿಂದಾಗಿ ಹಲವು ಟಿಡಿಪಿ ಕಾರ್ಯಕರ್ತರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಚಂದ್ರಬಾಬು ನಾಯ್ಡು ನಿರ್ಗಮನದ ನಂತರ ಹಿಂದಿರುಗಿದ ವೈಎಸ್‌ಆರ್‌ಸಿಪಿ ಕಾರ್ಯಕರ್ತರು ಟಿಡಿಪಿ ಮುಖಂಡರ ಕಾರುಗಳು ಮತ್ತು 'ಮಹಾಶಕ್ತಿ' ವಾಹನವನ್ನು ಧ್ವಂಸಗೊಳಿಸಿದರು. ಆದರೆ, ಆ ವೇಳೆ ಪೊಲೀಸರು ಮೂಕ ಪ್ರೇಕ್ಷಕರಂತೆ ನಿಂತಿದ್ದರು ಎಂದು ಆರೋಪಿಸಲಾಗಿದೆ.
ಘಟನೆಯ ಹಿನ್ನೆಲೆ: ಚಂದ್ರಬಾಬು ನಾಯ್ಡು ಅವರ ಭೇಟಿಯನ್ನು ವಿರೋಧಿಸಿ ಶುಕ್ರವಾರ ಬೆಳಗ್ಗೆ ಪುಂಗನೂರು ಪಟ್ಟಣದಲ್ಲಿ 1200ಕ್ಕೂ ಹೆಚ್ಚು ವೈಎಸ್‌ಆರ್‌ಸಿಪಿ ಮುಖಂಡರು ಮತ್ತು ಕಾರ್ಯಕರ್ತರಿಗೆ ಬೃಹತ್ ಪ್ರತಿಭಟನೆ ನಡೆಸಲು ಪೊಲೀಸರು ಅವಕಾಶ ನೀಡಿದ್ದರು. ಪುಂಗನೂರಿನಲ್ಲಿ ಚಂದ್ರಬಾಬು ಅವರ ರೋಡ್‌ಶೋಗೆ ಟಿಡಿಪಿ ನಾಯಕರು ಎರಡು ದಿನಗಳ ಹಿಂದೆ ಅನುಮತಿ ಕೇಳುತ್ತಿದ್ದಾರೆ ಎಂದು ಪೊಲೀಸರು ಹೇಳಿದ್ದರು. ಮೊದಲ ಶೆಡ್ಯೂಲ್ ಪ್ರಕಾರ ಪಟ್ಟಣದಲ್ಲಿ ಚಂದ್ರಬಾಬು ರೋಡ್ ಶೋ ಇಲ್ಲದ ಕಾರಣ ಊರಿಗೆ ಬರಲು ಸಾಧ್ಯವಿಲ್ಲ ಎಂದು ಪಟ್ಟು ಹಿಡಿದರು. ಭೀಮಗಾನಿಪಲ್ಲಿ ಬೈಪಾಸ್‌ನಲ್ಲಿ ಚಂದ್ರಬಾಬು ಬೆಂಗಾವಲು ವಾಹನ ಪ್ರವೇಶಿಸದಂತೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಿ ಬ್ಯಾರಿಕೇಡ್ ಹಾಕಲಾಗಿತ್ತು.
ಟಿಡಿಪಿ ಕಾರ್ಯಕರ್ತರ ಮೇಲೆ ಲಾಠಿ ಪ್ರಹಾರ: ಚಂದ್ರಬಾಬು ಪುಂಗನೂರಿಗೆ ಬರಲು ಅವಕಾಶ ನೀಡುವಂತೆ ಪಟ್ಟು ಹಿಡಿದ ಟಿಡಿಪಿ ಕಾರ್ಯಕರ್ತರ ಮೇಲೆ ಲಾಠಿ ಪ್ರಹಾರ ನಡೆಸಲಾಯಿತು. ಇದರಿಂದ ಆಕ್ರೋಶಗೊಂಡ ಟಿಡಿಪಿ ಕಾರ್ಯಕರ್ತರು ಪೊಲೀಸರ ಮೇಲೆ ಕಲ್ಲು, ಬಾಟಲಿ, ಚಪ್ಪಲಿಯಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಇದರಿಂದ ಎರಡೂ ಕಡೆಯವರು ಗಾಯಗೊಂಡಿದ್ಧಾರೆ ಎನ್ನಲಾಗಿದೆ. ಘಟನೆ ಹತೋಟಿಗೆ ತರಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದರು.
ಎರಡು ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಝಡ್ ಪ್ಲಸ್ ಕೆಟಗರಿ ಭದ್ರತೆಯಲ್ಲಿರುವ ಪ್ರಮುಖ ವಿರೋಧ ಪಕ್ಷದ ನಾಯಕನ ಭೇಟಿ ವೇಳೆ ವೈಎಸ್‌ಆರ್‌ಸಿಪಿ ಪ್ರತಿಭಟನೆಗೆ ಪೊಲೀಸರು ಹೇಗೆ ಅನುಮತಿ ನೀಡಿದ್ದಾರೆ ಎಂದು ಟಿಡಿಪಿ ಮುಖಂಡರು ಕಿಡಿಕಾರಿದ್ದಾರೆ. ಚಂದ್ರಬಾಬು ನಾಯ್ಡು ಬೆಂಗಾವಲು ಪಡೆ ಪಟ್ಟಣ ಪ್ರವೇಶಿಸದಂತೆ ತಡೆಯಲು ನಾಲ್ವರು ಡಿಎಸ್‌ಪಿಗಳು, 10 ಸಿಐಗಳು ಮತ್ತು 20 ಎಸ್‌ಐಗಳನ್ನು ನಿಯೋಜಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಪುಂಗನೂರು ಹಿಂಸಾಚಾರ ಟಿಡಿಪಿ ಮುಖ್ಯಸ್ಥರ ಪಿತೂರಿ - ವೈಎಸ್ಆರ್ಪಿ ಆರೋಪ: ಪುಂಗನೂರಿನಲ್ಲಿ ಭುಗಿಲೆದ್ದ ಹಿಂಸಾಚಾರ ಟಿಡಿಪಿ ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು ರೂಪಿಸಿದ ಸಂಚು ಎಂದು ವೈಎಸ್‌ಆರ್‌ಸಿ ಪ್ರಧಾನ ಕಾರ್ಯದರ್ಶಿ ಸಜ್ಜಲ ರಾಮಕೃಷ್ಣ ರೆಡ್ಡಿ ಆರೋಪಿಸಿದ್ದಾರೆ. ಟಿಡಿಪಿ ಕಾರ್ಯಕರ್ತರು ಗೊಂದಲ ಸೃಷ್ಟಿಸುವ ಉದ್ದೇಶದಿಂದ ಬಂದಿದ್ದರು. "ಘರ್ಷಣೆಗಳು ಮತ್ತು ಹಿಂಸಾಚಾರ ನಾಯ್ಡು ಅಧಿಕಾರವನ್ನು ಮರಳಿ ಪಡೆಯಲು ಯಾವುದೇ ಕೆಳಮಟ್ಟಕ್ಕೆ ಇಳಿಯಬಹುದು ಎಂದು ಸ್ಪಷ್ಟವಾಗಿ ಸೂಚಿಸುತ್ತದೆ" ಎಂದು ಕಿಡಿಕಾರಿದರು.
'14 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ ವ್ಯಕ್ತಿ ಪೊಲೀಸರ ಮೇಲೆ ಹೇಗೆ ಪ್ರಚೋದನೆ ಮತ್ತು ನಿಂದನೆ ಮಾಡಲು ಸಾಧ್ಯ?. ನಾಯ್ಡು ಅವರು ಅಧಿಕಾರದಲ್ಲಿ ಇಲ್ಲದಿದ್ದಾಗ ಹಿಂಸಾಚಾರವನ್ನು ಪ್ರಚೋದಿಸುತ್ತಾರೆ ಎಂಬುದನ್ನು ಇದು ಸ್ಪಷ್ಟವಾಗಿ ಬಹಿರಂಗಪಡಿಸುತ್ತದೆ' ಎಂದು ಸಜ್ಜಲ ಹೇಳಿದ್ದಾರೆ. 'ವಿರೋಧ ಪಕ್ಷದ ನಾಯಕರು ಕಾನೂನು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿಯನ್ನು ಮರೆತು ತಮ್ಮ ಭೇಟಿಯ ವೇಳೆ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ ನಾಯ್ಡು ಅವರಿಗೆ ರಾಜಕೀಯದಲ್ಲಿ ಮುಂದುವರಿಯುವ ಅಥವಾ ಸುಸಂಸ್ಕೃತ ಸಮಾಜದಲ್ಲಿ ಬದುಕುವ ಹಕ್ಕಿಲ್ಲ' ಎಂದು ಅವರು ಟೀಕಿಸಿದರು.
ನಾಯ್ಡು ಅವರ ದುಷ್ಟ ಉದ್ದೇಶಗಳು ಸಾಕ್ಷಿ ಸಮೇತ ಬಯಲಿಗೆ ಬಂದವು. "ಅವರು ಜನರೊಂದಿಗೆ ಸಂವಹನ ನಡೆಸಲು ರಾಜ್ಯ ಪ್ರವಾಸ ಮಾಡುತ್ತಿಲ್ಲ, ಬದಲಾಗಿ ಅವರು ದಾಳಿ ನಡೆಸಿ ರಾಜ್ಯ ಸರ್ಕಾರವನ್ನು ದೂಷಿಸಲು ಬಯಸುತ್ತಾರೆ. ತನ್ನ ಮೇಲೆ ದಾಳಿ ನಡೆಯುತ್ತಿದೆ ಎಂದು ಸಹಾನುಭೂತಿ ಪಡೆಯಲು ಬಯಸುತ್ತಾರೆ" ಎಂದು ವೈಎಸ್‌ಆರ್‌ಸಿ ಪ್ರಧಾನ ಕಾರ್ಯದರ್ಶಿ ಆರೋಪಿಸಿದರು.
ಇದನ್ನೂ ಓದಿ: ಟಿಡಿಪಿ ಕಾರ್ಯಕ್ರಮದಲ್ಲಿ ಮತ್ತೊಂದು ದುರಂತ: ಕಾಲ್ತುಳಿತದಲ್ಲಿ ಮೂವರು ಮಹಿಳೆಯರ ಸಾವು