ನವದೆಹಲಿ: ಮುಂಬೈ ಕ್ರೂಸ್ ಡ್ರಗ್ಸ್ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ನೊಂದಿಗೆ ಎನ್‌ಸಿಬಿ ಕಚೇರಿಯಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡು ಸುದ್ದಿಯಾಗಿದ್ದ ಕಿರಣ್ ಗೋಸಾವಿ ಎಂಬಾತನ ವಿರುದ್ಧ ಪುಣೆ ನಗರ ಪೊಲೀಸರು ಲುಕ್ಔಟ್ ನೋಟಿಸ್ ಹೊರಡಿಸಿದ್ದಾರೆ.
ಪುಣೆ ನಗರ ಪೊಲೀಸ್ ಆಯುಕ್ತ ಅಮಿತಾಬ್ ಗುಪ್ತಾ ಈ ಕುರಿತು ಇನ್ನಷ್ಟು ಮಾಹಿತಿ ನೀಡಿದ್ದಾರೆ. ಕಿರಣ್ ಗೋಸಾವಿ ವಿರುದ್ಧ ಲುಕ್ಔಟ್ ನೋಟಿಸ್ ನೀಡಲಾಗಿದೆ. ಆತನನ್ನು ದೇಶದ ಹೊರಹೋಗದಂತೆ ನಿರ್ಬಂಧಿಸಲಾಗಿದೆ. 2018ರಲ್ಲಿ ಪುಣೆ ನಗರ ಪೋಲಿಸ್ ಠಾಣೆಯಲ್ಲಿ ದಾಖಲಾದ ಪ್ರಕರಣವೊಂದರಲ್ಲಿ ಗೋಸಾವಿ ಬೇಕಾಗಿದ್ದಾನೆ. ಈ ಪ್ರಕರಣದ ಕುರಿತು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ ಎಂದಿದ್ದಾರೆ.
ಮಲೇಷಿಯಾದಲ್ಲಿ ಉದ್ಯೋಗ ಕೊಡಿಸುವುದಾಗಿ ಹಣ ಪಡೆದು ವಂಚಿಸಿರುವ ಆರೋಪ ಕಿರಣ್ ಗೋಸಾವಿ ಮೇಲಿದ್ದು, ಮೇ 19, 2018ರಂದು ಪುಣೆ ನಗರದ ಫರಾಸ್ಕಾನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಕಿರಣ್ ಗೋಸಾವಿ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 419, 420ರ ಅಡಿಯಲ್ಲಿ ಹಾಗೂ ಬೌದ್ಧಿಕ ತಂತ್ರಜ್ಞಾನ (ಐಟಿ) ಕಾಯ್ದೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ದೂರು ದಾಖಲಿಸಲಾಗಿದೆ.
ಅಕ್ಟೋಬರ್ 2ರಂದು ಮುಂಬೈನ ಕ್ರೂಸ್ ಹಡಗಿನಲ್ಲಿ ನಡೆದ ಎನ್‌ಸಿಬಿ ದಾಳಿಯಲ್ಲಿ ಗೋಸಾವಿ ಸಾಕ್ಷಿಯಾಗಿದ್ದರು. ಇದರ ಮಧ್ಯೆ ಗೋಸಾವಿ ಎನ್ಸಿಬಿಯ ಅಧಿಕಾರಿ ಅಥವಾ ಉದ್ಯೋಗಿ ಅಲ್ಲ ಎಂದು ಎನ್‌ಸಿಬಿ ಸ್ಪಷ್ಟನೆಯನ್ನೂ ನೀಡಿತ್ತು.
ಇದನ್ನೂ ಓದಿ: ತಂದೆ, ಎಸ್ಪಿ, ಬಿಎಸ್ಪಿ ಕಾರ್ಯಕರ್ತರಿಂದ ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಗೆ ಭದ್ರತೆ