ನವದೆಹಲಿ: ಕೃಷಿ ಮಸೂದೆ ವಿರೋಧಿಸಿ ರೈತರ ದೆಹಲಿ ಚಲೋಗೆ ಮಣಿದ ಸರ್ಕಾರ ದೆಹಲಿ ಪ್ರವೇಶಿಸಲು ರೈತರಿಗೆ ಕೊನೆಗೂ ಅನುಮತಿ ನೀಡಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ರೈತ ಸಂಘದ ನಡುವಿನ ಸಭೆಯ ನಂತರ ಶಾಂತಿಯುತ ಪ್ರತಿಭಟನೆಗೆ ಅವಕಾಶ ನೀಡಿದ್ದು, ನಗರದ ನಿರಂಕರಿ ಮೈದಾನದಲ್ಲಿ ಪ್ರತಿಭಟನೆ ನಡೆಸಲು ಸ್ಥಳ ನಿಗದಿ ಮಾಡಲಾಗಿದೆ.
ಅಖಿಲ ಭಾರತ ಕಿಸಾನ್ ಸಂಘರ್ಷ್ ಸಮನ್ವಯ ಸಮಿತಿಯ (ಎಐಕೆಎಸ್‌ಸಿಸಿ) ರಾಷ್ಟ್ರೀಯ ಸಂಚಾಲಕ ವಿ.ಎಂ.ಸಿಂಗ್, ಪ್ರತಿಭಟನಾ ನಿರತ ರೈತರ ಮೇಲೆ ಅಶ್ರುವಾಯು ಮತ್ತು ಜಲ ಫಿರಂಗಿಗಳನ್ನು ಬಳಸಿರುವುದನ್ನು ಖಂಡಿಸಿದ್ದಾರೆ.
ಈಟಿವಿ ಭಾರತ್ ಜೊತೆ ಮಾತನಾಡಿದ ಅವರು, ನವೆಂಬರ್ 1ರಂದು ರಾಮ್ ಲೀಲಾ ಮೈದಾನದಲ್ಲಿ ಪ್ರತಿಭಟನೆಗೆ ಅವಕಾಶ ಕೇಳಿದಾಗಲು ನಿರಾಕರಿಸಲಾಗಿತ್ತು, ಬಳಿಕ ರೈತರನ್ನು ಬಂಧಿಸಲಾಗಿತ್ತು. ರೈತರು ಈ ಕಾನೂನುಗಳ ವಿರುದ್ಧವಾಗಿದ್ದಾರೆ ಮತ್ತು ಸರ್ಕಾರ ಅದನ್ನು ಹಿಂತೆಗೆದುಕೊಳ್ಳುವವರೆಗೂ ಪ್ರತಿಭಟನೆ ನಡೆಸುತ್ತೇವೆ. ಸಮುದಾಯದೊಂದಿಗೆ ಚರ್ಚೆಯ ಬಳಿಕ ತಮ್ಮ ಮುಂದಿನ ನಿಲುವು ತಿಳಿಸಲಾಗುತ್ತದೆ ಎಂದಿದ್ದಾರೆ.
ಈ ಪ್ರತಿಭಟನೆಯಲ್ಲಿ 30ಕ್ಕೂ ಹೆಚ್ಚು ರೈತ ಪರ ಸಂಘಟನೆಗಳು ಭಾಗಿಯಾಗಿವೆ. ಕೃಷಿ ಮಸೂದೆಯ ಕುರಿತು ಚರ್ಚಿಸಲು ದೆಹಲಿಗೆ ತೆರಳಲಿದ್ದಾರೆ. ಇಲ್ಲಿನ ಲಾಲ್ರು, ಶಂಭು, ಪಟಿಯಾಲ, ಪೆಹೋವಾ, ಪತ್ರನ್-ಖಾನೌರಿ, ತಲ್ವಾಂಡಿ-ಸಿರ್ಸಾ ಮಾರ್ಗಗಳ ಮೂಲಕ ದೆಹಲಿ ತಲುಪಲಿದ್ದಾರೆ.
ಕೇಂದ್ರ ಸರ್ಕಾರವು ಘೋಷಿಸಿರುವ ಹೊಸ ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳಬೇಕು ಹಾಗೂ ಸಮರ್ಪಕ ಚರ್ಚೆಯ ಬಳಿಕ ಮತ್ತೊಮ್ಮೆ ಅಂಗೀಕಾರ ಮಾಡಬೇಕು ಎಂದು ಆಗ್ರಹಿಸುತ್ತಿದ್ದಾರೆ.
ಪಂಜಾಬ್, ಹರಿಯಾಣ, ರಾಜಸ್ಥಾನ, ಉತ್ತರ ಪ್ರದೇಶ, ಉತ್ತರ ಖಂಡ್ ಸೇರಿದಂತೆ ಹಲವು ರಾಜ್ಯಗಳ ರೈತರು ದೆಹಲಿ ಚಲೋ ಕೈಗೊಂಡಿದ್ದಾರೆ. ರೈತರ ಹೋರಾಟಕ್ಕೆ ದೆಹಲಿಯ ಎಎಪಿ ಪಕ್ಷ, ಕಾಂಗ್ರೆಸ್ ಸೇರಿದಂತೆ ವಿವಿಧ ಪಕ್ಷಗಳು ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿವೆ.