ನವದೆಹಲಿ: ಈಗಾಗಲೇ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಕಳೆದೊಂದು ವರ್ಷದಿಂದ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರು ಇಂದು ಲಖೀಂಪುರ್ ಖೇರಿ ಹಿಂಸಾಚಾರದ ವಿರುದ್ಧ 'ರೈಲ್ ರೋಕೋ' ಪ್ರತಿಭಟನೆ ನಡೆಸುತ್ತಿದ್ದಾರೆ.
ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ರೈತ ಸಂಘಟನೆಯು ದೇಶಾದ್ಯಂತ ಆರು ಗಂಟೆಗಳ ಕಾಲ ರೈಲ್ ರೋಕೋ ಪ್ರತಿಭಟನೆಗೆ ಕರೆ ನೀಡಿರುವ ಹಿನ್ನೆಲೆ ಪಂಜಾಬ್ ಮತ್ತು ಹರಿಯಾಣದ ಎಲ್ಲಾ ರೈಲ್ವೆ ಹಳಿಗಳ ಮೇಲೆ ರೈತರು ಕುಳಿತು ಧರಣಿ ನಡೆಸುತ್ತಿದ್ದಾರೆ. ಪರಿಣಾಮ ಎಲ್ಲ ಮಾರ್ಗಗಳಲ್ಲಿ ರೈಲು ಸಂಚಾರ ಸ್ಥಗಿತವಾಗಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ.
ಲಖೀಂಪುರ್ ಖೇರಿ ಹಿಂಸಾಚಾರ ಪ್ರಕರಣದ ಆರೋಪಿ ಆಶಿಶ್ ಮಿಶ್ರಾ, ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಪುತ್ರನಾಗಿರುವ ಕಾರಣ ಅಜಯ್ ಮಿಶ್ರಾರನ್ನು ಕೇಂದ್ರ ಸಚಿವ ಸಂಪುಟದಿಂದ ತೆಗೆದುಹಾಕಬೇಕೆಂಬ ಬೇಡಿಕೆಯನ್ನು ಬೆಂಬಲಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಇಂದು ಬೆಳಗ್ಗೆ 10 ಗಂಟೆಗೆ ಪ್ರತಿಭಟನೆ ಆರಂಭವಾಗಿದ್ದು, ಸಂಜೆ 4 ಗಂಟೆಯವರೆಗೆ ಮುಂದುವರೆಯಲಿದೆ.
ಇದನ್ನೂ ಓದಿ: ಲಖೀಂಪುರ ಹಿಂಸಾಚಾರ: ಕೇಂದ್ರ ಸಚಿವರ ರಾಜೀನಾಮೆಗೆ ಆಗ್ರಹಿಸಿ ಇಂದು ರೈತರಿಂದ ರೈಲು ತಡೆ ಚಳವಳಿ
ಈ ಬಗ್ಗೆ ಈಟಿವಿ ಭಾರತದ ಜೊತೆ ಗಾಜಿಯಾಬಾದ್ನಲ್ಲಿ ಮಾತನಾಡಿರುವ ರೈತ ಮುಖಂಡ ರಾಕೇಶ್ ಟಿಕಾಯತ್, "ಇದುವರೆಗೂ ರೈತರು ಕೃಷಿ ಕಾನೂನುಗಳನ್ನು ಹಿಂಪಡೆಯಲು, ಕನಿಷ್ಠ ಬೆಂಬಲದ ಮೇಲೆ ಕಾನೂನಿನ ಖಾತರಿಗಾಗಿ ಆಂದೋಲನ ನಡೆಸುತ್ತಿದ್ದರು. ಈಗ ಕೇಂದ್ರ ಗೃಹ ಸಚಿವ ಅಜಯ್ ಮಿಶ್ರಾರನ್ನು ಸಚಿಬ ಸ್ಥಾನದಿಂದ ತೆಗೆದುಹಾಕುವ ಬೇಡಿಕೆಯನ್ನು ರೈತರ ಚಳುವಳಿಗೆ ಸೇರಿಸಲಾಗಿದೆ. ರೈತರನ್ನು ಪೊಲೀಸರು ಅವರ ಮನೆಗಳಲ್ಲಿ ತಡೆದಿದ್ದಾರೆ. ನಾವು ರೈಲುಗಳನ್ನು ತಡೆಯುತ್ತಿದ್ದೇವೆ" ಎಂದು ಹೇಳಿದರು.