ಲಖನೌ: ಕೇಂದ್ರ ಸಚಿವ ಅಜಯ್ ಮಿಶ್ರಾ ಅವರೊಂದಿಗೆ ವೇದಿಕೆ ಹಂಚಿಕೊಳ್ಳದಂತೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ( Congress general secretary Priyanka Gandhi Vadra) ಅವರು ಶನಿವಾರ ಲಖನೌದಲ್ಲಿರುವ ಪ್ರಧಾನಿ ನರೇಂದ್ರ ಮೋದಿ(Prime Minister Narendra Modi ) ಅವರಿಗೆ ಪತ್ರ ಬರೆದಿದ್ದಾರೆ. ಡಿಜಿಪಿ ಸಮಾವೇಶಕ್ಕಾಗಿ ಪ್ರಧಾನಿ ಉತ್ತರ ಪ್ರದೇಶದ ರಾಜಧಾನಿಯಲ್ಲಿದ್ದಾರೆ.
![Priyanka Gandhi pens letter to PM Modi](https://etvbharatimages.akamaized.net/etvbharat/prod-images/13685076_img-20211120-wa0001.jpg)
ದೇಶದ ರೈತರ ಬಗ್ಗೆ ನಿಮ್ಮ ಉದ್ದೇಶಗಳು ಸ್ಪಷ್ಟವಾಗಿದ್ದರೆ, ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವರೊಂದಿಗೆ ವೇದಿಕೆ ಹಂಚಿಕೊಳ್ಳಬೇಡಿ. ಅವರನ್ನು ವಜಾಗೊಳಿಸಿ ಎಂದು ಪ್ರಿಯಾಂಕಾ ಗಾಂಧಿ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಅ.3 ರಂದು ಲಖಿಂಪುರ ಖೇರಿಯ ಟಿಕುನಿಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 8 ಜನರನ್ನು ಬಲಿ ತೆಗೆದುಕೊಂಡ ಹಿಂಸಾಚಾರದ 13 ಆರೋಪಿಗಳಲ್ಲಿ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಕೂಡ ಸೇರಿದ್ದಾರೆ. ಅ.9 ರಂದು ಅವರನ್ನು ಬಂಧಿಸಲಾಗಿದ್ದು, ಪ್ರಕರಣದ ಎಲ್ಲಾ 13 ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ.
ಲಖಿಂಪುರ ಹಿಂಸಾಚಾರ ಪ್ರಜಾಪ್ರಭುತ್ವಕ್ಕೆ ಕಳಂಕ: ವರುಣ್ ಗಾಂಧಿ
ಲಖಿಂಪುರ ಖೇರಿ ಹಿಂಸಾಚಾರ ಘಟನೆ "ನಮ್ಮ ಪ್ರಜಾಪ್ರಭುತ್ವಕ್ಕೆ ಕಳಂಕ" ಎಂದು ಸಂಸದ ವರುಣ್ ಗಾಂಧಿ(MP Varun Gandhi) ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದ ಪತ್ರದಲ್ಲಿ ವರುಣ್ ಗಾಂಧಿ, ಈ ವಿಷಯಕ್ಕೆ ಸಂಬಂಧಿಸಿದಂತೆ ಆರೋಪ ಹೊತ್ತಿರುವ ಕೇಂದ್ರ ಸಚಿವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ರೈತರ ಸಮಸ್ಯೆ ಕುರಿತು ಪ್ರಧಾನಿ ಮೋದಿ ಅವರಿಗೆ ಬರೆದಿರುವ ಪತ್ರವನ್ನು ವರುಣ್ ಗಾಂಧಿ ಶನಿವಾರ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಕೇಂದ್ರದ ನಿರ್ಧಾರವನ್ನು ಸ್ವಾಗತಿಸಿದ ಅವರು, "ಪ್ರತಿಭಟಿಸುವ ರೈತರ ವಿರುದ್ಧ ಎಲ್ಲಾ ರಾಜಕೀಯ ಪ್ರೇರಿತ ಮತ್ತು ಸುಳ್ಳು ಎಫ್‌ಐಆರ್‌ಗಳನ್ನು" ರದ್ದುಗೊಳಿಸಬೇಕು ಎಂದು ಇದೇ ವೇಳೆ ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಹಿರಿಯ ಸ್ಥಾನಗಳಲ್ಲಿ ಕುಳಿತಿರುವ ಅನೇಕ ನಾಯಕರು ನಮ್ಮ ಧರಣಿ ನಿರತ ರೈತರ ವಿರುದ್ಧ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದಾರೆ. ಇಂತಹ ಹೇಳಿಕೆಗಳು ಮತ್ತು ಚಳವಳಿಯ ಸುತ್ತ ಸೃಷ್ಟಿಯಾದ ಪ್ರತಿಕೂಲ ವಾತಾವರಣದ ಪರಿಣಾಮವಾಗಿದೆ. ಅಕ್ಟೋಬರ್ 3 ರಂದು ಲಖೀಂಪುರದಲ್ಲಿ ನಮ್ಮ 8 ಮಂದಿ ರೈತ ಸಹೋದರರು ವಾಹನಗಳಿಗೆ ಸಿಲುಕಿ ಸಾವನ್ನಪ್ಪಿದರು. ಈ ಹೃದಯವಿದ್ರಾವಕ ಘಟನೆ ನಮ್ಮ ಪ್ರಜಾಪ್ರಭುತ್ವಕ್ಕೆ ಕಳಂಕವಾಗಿದೆ ಎಂದು ವರುಣ್ ಗಾಂಧಿ ಹೇಳಿದ್ದಾರೆ.
ಈ ಘಟನೆಗೆ ಸಂಬಂಧಿಸಿರುವ ಕೇಂದ್ರ ಸಚಿವರ ವಿರುದ್ಧ ಸೂಕ್ತ ಕಠಿಣ ಕ್ರಮ ಕೈಗೊಳ್ಳಬೇಕು ಹಾಗು ನ್ಯಾಯಯುತ ವಿಚಾರಣೆ ನಡೆಯಬೇಕು ಎಂದು ವರುಣ್ ಗಾಂಧಿ ಅವರು ಪ್ರಧಾನಿ ಮೋದಿಗೆ ಬರೆದ ಪತ್ರದಲ್ಲಿ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಮೂರು ಕೃಷಿ ಕಾನೂನುಗಳು ರದ್ದು: ಪ್ರಧಾನಿಗೆ ಹಿಂದಿಯಲ್ಲೇ ಪ್ರಿಯಾಂಕಾ ಕೌಂಟರ್ ಅಟ್ಯಾಕ್