ಬಾರಾಬಂಕಿ (ಉತ್ತರಪ್ರದೇಶ): ಇಂದು ಬಾರಾಬಂಕಿಯಿಂದ ಪ್ರಚಾರ ಆರಂಭಿಸಿರುವ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ಇತರ ಪಕ್ಷಗಳಿಗೆ ಮಾಸ್ಟರ್ ಸ್ಟ್ರೋಕ್ ಕೊಟ್ಟಿದ್ದಾರೆ. ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಹಲವು ವಾಗ್ದಾನ ಮಾಡಿದ್ದಾರೆ.
- ಮಹಿಳೆಯರು ರಾಜಕೀಯಕ್ಕೆ ಬಾರದೇ ಅವರ ಸಮಸ್ಯೆಗಳು ಬಗೆಹರಿಯಲ್ಲ. ಹಾಗಾಗಿ, ಕಾಂಗ್ರೆಸ್ ಶೇಕಡಾ 40 ರಷ್ಟು ಟಿಕೆಟ್ಗಳನ್ನು ಮಹಿಳೆಯರಿಗೆ ನೀಡುತ್ತದೆ.
- ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರೈತರ ಸಂಪೂರ್ಣ ಸಾಲ ಮನ್ನಾ ಮಾಡುವುದಾಗಿಯೂ ಅವರು ಘೋಷಿಸಿದ್ದಾರೆ.
- ಭತ್ತ, ಗೋಧಿಯ ಬೆಂಬಲ ಬೆಲೆ ಎರಡೂವರೆ ಸಾವಿರ ರೂಪಾಯಿ ಹೆಚ್ಚಿಸುವುದಾಗಿ ಘೋಷಣೆ
- ದೇಶದಲ್ಲಿ ದೊಡ್ಡ ಸಮಸ್ಯೆಯಾಗಿರುವ ನಿರುದ್ಯೋಗ ನಿವಾರಣೆಗೆ ಕ್ರಮ, 20 ಲಕ್ಷ ಜನರಿಗೆ ಉದ್ಯೋಗ ನೀಡುವುದಾಗಿ ಹೇಳಿಕೆ
ಕಾಂಗ್ರೆಸ್ನ ಪ್ರತಿಜ್ಞಾಯಾತ್ರೆಗೂ ಮುನ್ನ ಅವರು, ತಮರ್ಸೆಪುರ ಗ್ರಾಮದ ಹೊಲಗಳಲ್ಲಿ ಕೆಲಸ ಮಾಡುವ ಮಹಿಳೆಯರನ್ನು ಭೇಟಿಯಾಗಿ ಸಂವಾದ ನಡೆಸಿದರು. ಅಲ್ಲದೇ, ಅವರ ಮಕ್ಕಳು, ಅವರ ಶಿಕ್ಷಣದ ಬಗ್ಗೆ ಚರ್ಚಿಸಿದರು.
ಉತ್ತರ ಪ್ರದೇಶದ ಕಾಂಗ್ರೆಸ್ ಉಸ್ತುವಾರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು 2022 ರ ವಿಧಾನಸಭಾ ಚುನಾವಣೆಯ ಚುನಾವಣಾ ಪ್ರಚಾರವನ್ನು ಪೂರ್ವಾಂಚಲ್‌ನ ಹೆಬ್ಬಾಗಿಲಾದ ಬಾರಾಬಂಕಿಯಿಂದ ಆರಂಭಿಸಿದರು. ಇಲ್ಲಿನ ಜೈದ್‌ಪುರ ವಿಧಾನಸಭೆಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ರೈತರು, ಕಾರ್ಮಿಕರು, ಮಹಿಳೆಯರು, ಯುವಕರು ಸೇರಿದಂತೆ ಎಲ್ಲರ ಅಭಿವೃದ್ಧಿಗಾಗಿ ಶ್ರಮಿಸುವುದಾಗಿ ಇಲ್ಲಿ ಪ್ರತಿಜ್ಞೆ ಮಾಡಿದ್ದಾರೆ.
ಇದನ್ನೂ ಓದಿ: 'ಸಾಲಭಾಗ್ಯದ ರೂವಾರಿ' ಸಿದ್ದರಾಮಯ್ಯ ಆರ್ಥಿಕತೆಗೆ ನೊಬೆಲ್ ಪ್ರಶಸ್ತಿ ನೀಡಬೇಕು : ಬಿಜೆಪಿ ವ್ಯಂಗ್ಯ
ಕಾಂಗ್ರೆಸ್ 2022 ರ ವಿಧಾನಸಭಾ ಚುನಾವಣೆಯಲ್ಲಿ ತನ್ನ ಯಶಸ್ಸಿಗೆ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಆರಂಭಿಸಿದೆ. ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ಉತ್ತರಪ್ರದೇಶದ ಅಧಿಕಾರವನ್ನು ವಹಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಅತಂತ್ರವಾಗಿರುವ ಕಾಂಗ್ರೆಸ್ ಪಕ್ಷವನ್ನು ಹಳೆ ಸ್ಥಿತಿಗೆ ತರಲು ಪ್ರಿಯಾಂಕಾ ಗಾಂಧಿ ಪ್ರಯತ್ನಿಸುತ್ತಿದ್ದಾರೆ.