ಲಕ್ನೋ (ಯುಪಿ): ಬಿಜೆಪಿ ಸಂಸದ ಹಾಗು ಪಕ್ಷದ ಹಿರಿಯ ನಾಯಕಿ ಮೇನಕಾ ಗಾಂಧಿ ಅವರ ಪುತ್ರ ವರುಣ್ ಗಾಂಧಿ ಉತ್ತರ ಪ್ರದೇಶ ಬಿಜೆಪಿ ನಾಯಕತ್ವಕ್ಕೆ ಸವಾಲಾಗಿ ಪರಿಣಮಿಸಿದ್ದಾರೆ.
ರಾಜ್ಯದಲ್ಲಿ 2022ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಈಗಿನಿಂದಲೇ ಭರ್ಜರಿ ತಯಾರಿ ನಡೆಯುತ್ತಿದ್ದು, ಇಂತಹ ನಿರ್ಣಾಯಕ ಸಂದರ್ಭದಲ್ಲಿ ಪಕ್ಷದ ನಿರ್ಧಾರಗಳನ್ನು ವರುಣ್ ಆಗಾಗ್ಗೆ ಬಹಿರಂಗವಾಗಿಯೇ ಟೀಕಿಸುತ್ತಿದ್ದಾರೆ. ಪಕ್ಷದ ನೀತಿ-ನಿರ್ಧಾರಗಳನ್ನು ವಿರೋಧಿಸುವ, ಟೀಕಿಸುವ ಅವರ ಹೇಳಿಕೆಗಳು ಬಿಜೆಪಿಗೆ ಮುಜುಗರ ಉಂಟುಮಾಡುತ್ತಿದೆ ಎನ್ನಲಾಗುತ್ತಿದೆ. ಈ ಬೆಳವಣಿಗೆಗಳ ಮಧ್ಯೆ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ತಮ್ಮ ಸೋದರಸಂಬಂಧಿಯನ್ನು ಮತ್ತೆ ಸೇರಬೇಕೆಂದು ಬಯಸುತ್ತಾರೆ ಎಂಬ ಸುದ್ದಿ ಸಾರ್ವಜನಿಕ ವಲಯದಲ್ಲಿ ಕುತೂಹಲ ಹೆಚ್ಚಿಸಿದೆ.
ಗಾಂಧಿ ಕುಟುಂಬದ ಆಪ್ತ ಮೂಲಗಳ ಪ್ರಕಾರ, ಕಾಂಗ್ರೆಸ್ ನಾಯಕಿಗೆ ತನ್ನ ಕಿರಿಯ ಸಹೋದರನ ಮೇಲಿನ ಪ್ರೀತಿ ಮತ್ತು ವಿಶ್ವಾಸ ಹೆಚ್ಚಾಗಿದೆಯಂತೆ. ವರುಣ್ ತನ್ನೆಲ್ಲಾ ಅಸಮಾಧಾನಗಳನ್ನು ಮರೆತು ಮನೆಗೆ(ಕಾಂಗ್ರೆಸ್ ಪಕ್ಷ) ಮರಳಬೇಕೆಂದು ಬಯಸುತ್ತಿದ್ದಾರಂತೆ.
ಸಿಎಂ ಯೋಗಿ ವಿರುದ್ಧ ವಾಕ್ಸಮರ ನಡೆಸಿದ್ದ ವರುಣ್:
ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಬಿಜೆಪಿ ಸಂಸದ ವರುಣ್ ಗಾಂಧಿ, ರೈತರ ಮೇಲಿನ ದೌರ್ಜನ್ಯ ಮತ್ತು ಭ್ರಷ್ಟಾಚಾರದ ಪ್ರಕರಣಗಳು ಮುನ್ನೆಲೆಗೆ ಬಂದರೆ ನಾನು ಸರ್ಕಾರಕ್ಕೆ ಹೇಳುವುದೇನಿಲ್ಲ. ಬದಲಾಗಿ ನೇರವಾಗಿ ನ್ಯಾಯಾಲಯದ ಮೊರೆ ಹೋಗುತ್ತೇನೆ ಎಂದು ಎಚ್ಚರಿಸಿದ್ದರು.
ಹೀಗಿರುವಾಗ, ರಾಜ್ಯದಲ್ಲಿ ಬಿಜೆಪಿಗೆ ಗಾಂಧಿ ಕುಟುಂಬದಿಂದ ಎರಡು ರೀತಿಯ ಸವಾಲು ಎದುರಾಗಿದೆ. ಒಂದೆಡೆ, ಪ್ರಿಯಾಂಕಾ ತನ್ನ ಆಕ್ರಮಣಕಾರಿ ಪ್ರಚಾರದ ಮೂಲಕ ಬಿಜೆಪಿಯ ತಲೆನೋವು ಹೆಚ್ಚಿಸಿದರೆ, ವರುಣ್ ಗಾಂಧಿ ನಿರಂತರವಾಗಿ ಪಕ್ಷದ ಆಂತರಿಕ ನಿರ್ಧಾರಗಳನ್ನು ವಿರೋಧಿಸುವ ಹೇಳಿಕೆಗಳನ್ನು ನೀಡುತ್ತಿದ್ದಾರೆ.
ಬಿಜೆಪಿಯಲ್ಲಿ ನಿರ್ಲಕ್ಷ್ಯ ತೋರಿದ್ದಕ್ಕೆ ವರುಣ್ ಗಾಂಧಿ ಸಿಟ್ಟಿಗೆದ್ದಿದ್ದು, ಸದ್ಯದಲ್ಲೇ ಬಿಜೆಪಿ ಕೈಬಿಡುವ ಮೂಲಕ ದೊಡ್ಡ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಲಖಿಂಪುರ ಘಟನೆಗೂ ವರುಣ್ ಬಹಿರಂಗ ಖಂಡನೆ:
ಲಖಿಂಪುರ ಖೇರಿಯಲ್ಲಿ ನಡೆದ ಘಟನೆಯನ್ನು ವರುಣ್ ಗಾಂಧಿ ಬಹಿರಂಗವಾಗಿಯೇ ಟೀಕಿಸಿದ್ದರು. ಕೇಂದ್ರ ಸಚಿವ ಅಜಯ್ ಮಿಶ್ರಾ ಥೇನಿ ಮತ್ತು ಅವರ ಪುತ್ರನ ವಿರುದ್ಧ ವಾಕ್ಸಮರ ನಡೆಸಿದ್ದನ್ನು ಇಲ್ಲಿ ನೆನಪಿಸಬಹುದು.