ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಸಚಿವ ಸಂಪುಟಕ್ಕೆ ಮೇಜರ್ ಸರ್ಜರಿ ನಡೆಸಲಾಗಿದೆ. ಕಾನೂನು ಸಚಿವರಾಗಿದ್ದ ಕಿರಣ್ ರಿಜಿಜು ಅವರ ಸ್ಥಾನಕ್ಕೆ ಅರ್ಜುನ್ ರಾಮ್ ಮೇಘವಾಲ್ ಅವರನ್ನು ನೇಮಕ ಮಾಡಲಾಗಿದೆ. ರಿಜಿಜು ಅವರು ಕಾನೂನು ಖಾತೆಯನ್ನು ಕಳೆದುಕೊಂಡಿದ್ದಾರೆ.
ಸುಪ್ರೀಂ ಕೋರ್ಟ್‌ನ ಕೊಲಿಜಿಯಂ ವಿರುದ್ಧ ಸಾಲು ಸಾಲಾಗಿ ಟೀಕೆ ಮಾಡುತ್ತಿದ್ದ ಕಾನೂನು ಸಚಿವ ಕಿರಣ್ ರಿಜಿಜು ಅವರ ಖಾತೆಯನ್ನು ಬದಲಿಸಲಾಗಿದೆ. ಅವರಿಗೀಗ ಭೂ ವಿಜ್ಞಾನ ಖಾತೆಯನ್ನು ಹಂಚಿಕೆ ಮಾಡಲಾಗಿದೆ. ಸಂಸದೀಯ ವ್ಯವಹಾರಗಳು ಮತ್ತು ಸಂಸ್ಕೃತಿ ಖಾತೆ ರಾಜ್ಯ ಸಚಿವರಾಗಿದ್ದ ಅರ್ಜುನ್ ರಾಮ್ ಮೇಘವಾಲ್ ಅವರಿಗೆ ಕಾನೂನು ಮತ್ತು ನ್ಯಾಯ ಖಾತೆಯ ರಾಜ್ಯ ಸಚಿವರಾಗಿ(ಸ್ವತಂತ್ರ) ಬಡ್ತಿ ನೀಡಲಾಗಿದೆ ಎಂದು ರಾಷ್ಟ್ರಪತಿ ಭವನ ಪ್ರಕಟಣೆ ಹೊರಡಿಸಿದೆ.
ಪ್ರಧಾನ ಮಂತ್ರಿಯವರ ಸಲಹೆಯಂತೆ ರಾಷ್ಟ್ರಪತಿಗಳಾದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಚಿವರ ಖಾತೆಯನ್ನು ಬದಲಾವಣೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಟ್ವಿಟರ್ನಲ್ಲಿ ಖಾತೆ ವಿವರ ಬದಲು: ಇತ್ತ ಕಿರಣ್ ರಿಜಿಜು ಅವರ ಖಾತೆ ಬದಲಾವಣೆ ಮಾಡಿದ ಬೆನ್ನಲ್ಲೇ ಟ್ವಿಟರ್ನಲ್ಲೂ ಅವರೂ ತಮ್ಮ ಖಾತೆಯ ವಿವರವನ್ನು ತಿದ್ದಿದ್ದಾರೆ. ಭೂ ವಿಜ್ಞಾನ ಸಚಿವ ಎಂದು ಅವರ ಬದಲಿಸಿಕೊಂಡಿದ್ದಾರೆ. ಇಂದು ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಅವರ ಜನ್ಮದಿನದ ಹಿನ್ನೆಲೆ ಟ್ವಿಟರ್ನಲ್ಲಿ ಶುಭ ಕೋರಿರುವ ಕಿರಣ್ ರಿಜಿಜು ಅವರ ಖಾತೆ ಬದಲಾಗಿರುವುದು ಕಾಣಬಹುದು.
ಕೊಲಿಜಿಯಂ ವಿರುದ್ಧ ಸಚಿವರ ಸಮರ: ಕೇಂದ್ರದ ಕಾನೂನು ಇಲಾಖೆ ಮಾಜಿ ಸಚಿವರಾದ ಕಿರಣ್ ರಿಜಿಜು ಅವರು ಇದಕ್ಕೂ ಮೊದಲು ಸುಪ್ರೀಂ ಹೈಕೋರ್ಟ್ಗಳಿಗೆ ನ್ಯಾಯಾಧೀಶರ ನೇಮಕ ಮಾಡುವ ಕೊಲಿಜಿಯಂ ಪದ್ಧತಿಯ ವಿರುದ್ಧ ಸಮರವೇ ಸಾರಿದ್ದರು. ಸುಪ್ರೀಂ ಕೋರ್ಟ್‌ನ ಕೊಲಿಜಿಯಂ ವಿವಿಧ ಹೈಕೋರ್ಟ್ಗಳಿಗೆ ನ್ಯಾಯಾಧೀಶರ ನೇಮಕಕ್ಕೆ ಶಿಫಾರಸು ಮಾಡಿದ್ದನ್ನು ಇವರು ಟೀಕಿಸಿದ್ದರು.
ಕೊಲಿಜಿಯಂ ವಿಚಾರದಲ್ಲಿ ಸುಪ್ರೀಂ ಮತ್ತು ಕೇಂದ್ರ ಸರ್ಕಾರದ ಮಧ್ಯೆ ತೀವ್ರ ತಿಕ್ಕಾಟ ನಡೆಯುತ್ತಿದೆ. ಬಹಿರಂಗವಾಗಿ ಸುಪ್ರೀಂ ನಿರ್ಧಾರವನ್ನು ಪ್ರಶ್ನಿಸುತ್ತಿದ್ದ ಸಚಿವ ಕಿರಣ್ ರಿಜಿುಜು ವಿರುದ್ಧ ಕೋರ್ಟ್ ಹಲವು ಬಾರಿ ಎಚ್ಚರಿಕೆಯನ್ನೂ ನೀಡಿದೆ.
ಮುಳುವಾದ ನ್ಯಾಯಾಂಗ ಟೀಕೆ: ಕಿರಣ್ ರಿಜಿಜು ಅವರನ್ನು ಕಾನೂನು ಖಾತೆಯಿಂದ ಮುಕ್ತಗೊಳಿಸಲಾಗಿದ್ದು, ಅವರು ನ್ಯಾಯಾಂಗದ ವಿರುದ್ಧ ನೀಡುತ್ತಿದ್ದ ಹೇಳಿಕೆಗಳೇ ಅವರಿಗೆ ಮುಳುವಾಗಿವೆ ಎಂದು ಬಿಜೆಪಿ ಮೂಲಗಳು ಈಟಿವಿ ಭಾರತಕ್ಕೆ ತಿಳಿಸಿವೆ. ಖಾತೆಗಳ ಮರುಹಂಚಿಕೆಯು ಮುಂದಿನ ವರ್ಷದ ಸಾರ್ವತ್ರಿಕ ಚುನಾವಣೆಯ ಮೊದಲು ನಡೆದಿರುವುದರಿಂದ ಮಹತ್ವ ಪಡೆದುಕೊಂಡಿದೆ.
ಅರುಣಾಚಲ ಪ್ರದೇಶದ ಸಂಸದರು ಕೊಲಿಜಿಯಂ ವಿರುದ್ಧ ಕೆಲ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ರಿಜಿಜು ಅವರನ್ನು ಕಾನೂನು ಸಚಿವಾಲಯದಿಂದ ವಜಾಗೊಳಿಸುವ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.
ಕಾನೂನು ಸಚಿವರಾಗಿದ್ದ ರಿಜಿಜು ಅವರು, "ಕೆಲವು ನಿವೃತ್ತ ನ್ಯಾಯಾಧೀಶರು ಸಾರ್ವಜನಿಕವಾಗಿ ಹೇಳಿಕೆ ನೀಡುವ ಭಾರತ ವಿರೋಧಿ ಗ್ಯಾಂಗ್‌ನ ಭಾಗವಾಗಿದ್ದಾರೆ. ನ್ಯಾಯಾಂಗವು ಹಾಲಿ ಮತ್ತು ನಿವೃತ್ತ ನ್ಯಾಯಾಧೀಶರ ಬಗ್ಗೆ ದೂರುಗಳನ್ನು ಸ್ವೀಕರಿದರೂ, ಇದು ಕೇವಲ ನ್ಯಾಯಾಧೀಶರ ನೇಮಕಾತಿಗಳಲ್ಲಿ ಮಾತ್ರ ಹೆಚ್ಚಿನ ಆಸ್ಥೆ ಹೊಂದಿದೆ ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ತೀವ್ರ ವಿರೋಧ ಕೂಡ ವ್ಯಕ್ತವಾಗಿತ್ತು.
ಅಲ್ಲದೇ, ದೇಶಾದ್ಯಂತದ ಸುಮಾರು 300 ವಕೀಲರು ಬಹಿರಂಗವಾಗಿ ಪತ್ರ ಬರೆದು, ಸಚಿವರು ತಮ್ಮ ಹೇಳಿಕೆಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದರು. ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಅವರು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶರ ವಿರುದ್ಧ ಸಾರ್ವಜನಿಕವಾಗಿ ಗಂಭೀರ ಆರೋಪ ಮಾಡಿರುವುದು ತಕ್ಕುದಲ್ಲ. ನ್ಯಾಯಕ್ಕಾಗಿ ಪ್ರಾಣವನ್ನೇ ಮುಡುಪಾಗಿಟ್ಟ ನ್ಯಾಯಾಧೀಶರೂ ಇದ್ದಾರೆ. ಅಂಥವರ ವಿರುದ್ಧ ದೇಶವಿರೋಧಿ ಆರೋಪಗಳು ಮತ್ತು ಅವರ ವಿರುದ್ಧ ಬೆದರಿಕೆಯು ಸಮಂಜಸವಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದರು.
ಇದನ್ನೂ ಓದಿ: ಸುಪ್ರೀಂ ಮಾಜಿ ನ್ಯಾಯಮೂರ್ತಿ ರಾಜ್ಯಪಾಲರಾಗಿ ನೇಮಕ.. ಟೀಕಾಕಾರರಿಗೆ ಕೇಂದ್ರ ಕಾನೂನು ಸಚಿವರ ತಿರುಗೇಟು