ನವದೆಹಲಿ: ಪ್ರತಿ ಎಲ್‌ಪಿಜಿ ಸಿಲಿಂಡರ್ ಬೆಲೆಯ 15 ರೂ. ಏರಿಕೆ ಮಾಡಲಾಗಿದೆ. ಈ ಮೂಲಕ ಎರಡು ತಿಂಗಳಿನಲ್ಲಿ ಸತತ ನಾಲ್ಕನೇ ಬಾರಿ ದರ ಹೆಚ್ಚಳ ಮಾಡಿದಂತಾಗಿದೆ.
ತಿಂಗಳ ಮೊದಲ ವಾರದಲ್ಲಿ ಗೃಹ ಬಳಕೆ ಎಲ್‌ಪಿಜಿ ಸಿಲಿಂಡರ್ ಮತ್ತೊಮ್ಮೆ ದುಬಾರಿಯಾಗಿದೆ. ಸರ್ಕಾರಿ ತೈಲ ಕಂಪನಿಗಳು ದೇಶೀಯ ಅನಿಲದ (LPG Cylinder) ಬೆಲೆಯನ್ನು ಮತ್ತೆ ಹೆಚ್ಚಿಸಿದ್ದು, ಗ್ರಾಹಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಅಕ್ಟೋಬರ್ 6 ರಂದು ಸಬ್ಸಿಡಿ ಇಲ್ಲದ 14.2 ಕೆ.ಜಿ ಸಿಲಿಂಡರ್ ಬೆಲೆಯನ್ನು 15 ರೂ ಏರಿಕೆ ಮಾಡಿರುವುದಾಗಿ ಸರ್ಕಾರಿ ತೈಲ ಕಂಪನಿಗಳು ತಿಳಿಸಿವೆ. ಈ ಬೆಲೆ ಏರಿಕೆಯೊಂದಿಗೆ ದೇಶದ ರಾಜಧಾನಿ ದೆಹಲಿಯಲ್ಲಿ ಎಲ್‌ಪಿಜಿ ಸಿಲಿಂಡರ್ ಬೆಲೆ 884.50 ರೂ ಯಿಂದ 899.50 ರೂ.ಗೆ ಏರಿಕೆಯಾಗಿದೆ. ಸದ್ಯಕ್ಕೆ 5 ಕೆಜಿ ಸಿಲಿಂಡರ್ ನಿಮಗೆ 502 ರೂ.ಗೆ ಲಭ್ಯವಾಗಲಿದೆ.
ಬೆಂಗಳೂರಿನಲ್ಲಿ ಸಿಲಿಂಡರ್ ಬೆಲೆ:
ಬೆಂಗಳೂರಿನಲ್ಲಿ 14.2 ಕೆಜಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ ರೂ. 903.19 ಇದೆ. 5 ಕೆ.ಜಿ ಸಿಲಿಂಡರ್ ಗೃಹ ಬಳಕೆ ದರ 333.19 ರೂ. ಇದ್ದು, 19 ಕೆಜಿ ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ ಸುಮಾರು 1795.19 ರೂ. ಇದೆ.