ಪಾಟ್ನಾ(ಬಿಹಾರ): ಇತ್ತೀಚಿನ ದಿನಗಳಲ್ಲಿ ಹೆಚ್ಚು ಚರ್ಚೆಯಲ್ಲಿರುವ ಚುನಾವಣಾ ಚಾಣಕ್ಯ ಪ್ರಶಾಂತ್ ಕಿಶೋರ್ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಈ ವೇಳೆ, ತಾವು ಯಾವುದೇ ಪಕ್ಷ ಘೋಷಣೆ ಮಾಡುತ್ತಿಲ್ಲ ಎಂದು ಸ್ಪಷ್ಟ ಪಡಿಸಿರುವ ಅವರು, ಬಿಹಾರ ಸುಧಾರಣೆಗೋಸ್ಕರ 3 ಸಾವಿರ ಕಿಲೋ ಮೀಟರ್ ಪಾದಯಾತ್ರೆ ಹಮ್ಮಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ.
ಪಶ್ಚಿಮ ಚಂಪಾರಣ್ದ ಗಾಂಧಿ ಆಶ್ರಮದಿಂದ ಈ ಪಾದಯಾತ್ರೆ ಆರಂಭಗೊಳ್ಳಲಿದ್ದು, ಅದಕ್ಕಾಗಿ ಅಕ್ಟೋಬರ್ 2 ದಿನಾಂಕ ನಿಗದಿ ಮಾಡಲಾಗಿದೆ ಎಂದರು. ಬಿಹಾರದ ಸುಧಾರಣೆಗೋಸ್ಕರ ಈ ಪಾದಯಾತ್ರ ಕೈಗೊಳ್ಳಲು ನಿರ್ಧಾರ ಮಾಡಲಾಗಿದ್ದು, ಬಹುತೇಕ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಪಾದಯಾತ್ರೆ ಸಂಚರಿಸಲಿದೆ ಎಂಬ ಮಾಹಿತಿ ಹಂಚಿಕೊಂಡರು.
ಇದನ್ನೂ ಓದಿ: ನಟಿ ಬಗ್ಗೆ ಅವಹೇಳನಕಾರಿ ಪೋಸ್ಟ್.. ಯುವಕ ಅರೆಸ್ಟ್
ಉತ್ತಮ ಆಡಳಿತ(Jan Suraaj) ಕಲ್ಪನೆಯ ಉದ್ದೇಶದಿಂದ ಜನರನ್ನ ಭೇಟಿ ಮಾಡಲು ನಿರ್ಧರಿಸಲಾಗಿದ್ದು, ಜನರನ್ನು ಕಚೇರಿಗಳಲ್ಲಿ ಹಾಗೂ ಅವರ ಮನೆಗಳಲ್ಲಿ ಖುದ್ದಾಗಿ ಭೇಟಿ ಮಾಡಿ, ಅವರ ಸಮಸ್ಯೆ ತಿಳಿಯಲು ಮುಂದಾಗುತ್ತಿದ್ದೇವೆ.
ಸದ್ಯಕ್ಕೆ ಯಾವುದೇ ರಾಜಕೀಯ ಪಕ್ಷ ಆರಂಭಿಸಲು ನಿರ್ಧರಿಸಿಲ್ಲ ಎಂದಿರುವ ಪ್ರಶಾಂತ್ ಕಿಶೋರ್, ಬಿಹಾರದ ಸಮಸ್ಯೆಗಳ ಬಗ್ಗೆ ಅರಿವಿರುವ ಸುಮಾರು 17ರಿಂದ 18 ಸಾವಿರ ಜನರೊಂದಿಗೆ ಸಂಪರ್ಕ ನಡೆಸಲಿದ್ದೇನೆ. ಜೊತೆಗೆ ಅವರನ್ನೆಲ್ಲ ಒಂದೇ ವೇದಿಕೆಯಡಿ ತರಲು ಪ್ರಯತ್ನಿಸುತ್ತೇನೆ ಎಂದರು. ಮುಂದಿನ 3-4 ತಿಂಗಳು ಈ ಕಲ್ಪನೆ ಇಟ್ಟುಕೊಂಡು ನಾನು ಎಲ್ಲರನ್ನೂ ಭೇಟಿ ಮಾಡಲಿದ್ದೇನೆ ಎಂದರು.
ಕಾಂಗ್ರೆಸ್ ಜೊತೆಗಿನ ಮಾತುಕತೆ ಮುರಿದು ಬೀಳಲು ಕಾರಣ ತಿಳಿಸಿದ ಪಿಕೆ: ಸುದ್ದಿಗೋಷ್ಠಿ ವೇಳೆ ಕಾಂಗ್ರೆಸ್ ಜೊತೆಗಿನ ಮಾತುಕತೆ ಬಿರಿದು ಬೀಳಲು ಕಾರಣ ತಿಳಿಸಿದ ಪ್ರಶಾಂತ್ ಕಿಶೋರ್, ಕಾಂಗ್ರೆಸ್ ಯಾವ ರೀತಿಯಾಗಿ ಕಾರ್ಯನಿರ್ವಹಿಸಬೇಕೆಂದು ನಿರ್ಧರಿಸಬೇಕು. ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಪ್ರಶಾಂತ್ ಕಿಶೋರ್ ಅಗತ್ಯವಿಲ್ಲ. ಪಕ್ಷದಲ್ಲಿ ನನಗಿಂತಲೂ ಹೆಚ್ಚು ಸಾಮರ್ಥ್ಯ ಹೊಂದಿರುವ ಜನರಿದ್ದಾರೆ.
ಕಳೆದ 30 ವರ್ಷಗಳಿಂದ ಬಿಹಾರದಲ್ಲಿ ನಿತೀಶ್ ಕುಮಾರ್ ಮತ್ತು ಲಾಲೂ ಪ್ರಸಾದ್ ಯಾದವ್ ಆಡಳಿತ ನಡೆಸಿದ್ದಾರೆ. ಆದರೂ ರಾಜ್ಯ ಅತ್ಯಂತ ಹಿಂದುಳಿದಿದೆ. ಬಿಹಾರ ಅಭಿವೃದ್ಧಿಯಾಗಬೇಕಾದರೆ, ಅನೇಕ ಅಭಿವೃದ್ಧಿ ಕಾರ್ಯಗಳಾಗಬೇಕಿದೆ ಎಂದರು. ಬಿಹಾರದಲ್ಲಿ ಶಿಕ್ಷಣ, ಆರೋಗ್ಯ ವ್ಯವಸ್ಥೆ ಸೇರಿದಂತೆ ಮೂಲ ಸೌಕರ್ಯಗಳು ಸರಿಯಾಗಿ ಲಭ್ಯವಾಗ್ತಿಲ್ಲ. ನಿರುದ್ಯೋಗ ಹೆಚ್ಚಾಗಿರುವ ಕಾರಣ ಯುವಕರು ಬೇರೆ ಬೇರೆ ರಾಜ್ಯಗಳಿಗೆ ವಲಸೆ ಹೋಗ್ತಿದ್ದಾರೆ ಎಂದರು.