ನವದೆಹಲಿ: ರಾಷ್ಟ್ರಪತಿ ಚುನಾವಣೆಗೆ ಎನ್‌ಡಿಎ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು ಇಂದು ಪ್ರಧಾನಿ ನರೇಂದ್ರ ಮೋದಿ ಉಪಸ್ಥಿತಿಯಲ್ಲಿ ನಾಮಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ತನ್ನ ಬಲ ಪ್ರದರ್ಶನವನ್ನೂ ಮಾಡಿತು. ಹಿರಿಯ ಬಿಜೆಪಿ ನಾಯಕರು ಮಾತ್ರವಲ್ಲದೇ ಮೈತ್ರಿಕೂಟದ ಇತರ ಪಕ್ಷಗಳ ನಾಯಕರೂ ಉಪಸ್ಥಿತರಿದ್ದರು. ಪ್ರಧಾನಿ ಮೋದಿ ಅವರೊಂದಿಗೆ ಸಚಿವರಾದ ಅಮಿತ್ ಶಾ, ರಾಜನಾಥ್ ಸಿಂಗ್, ನಿತಿನ್ ಗಡ್ಕರಿ, ಪ್ರಲ್ಹಾದ್ ಜೋಶಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಇದ್ದರು.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಅಸ್ಸೋಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜೈರಾಮ್ ಠಾಕೂರ್, ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಮತ್ತು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹಾಗೂ ಮೋದಿ ಸಂಪುಟದ ಅನೇಕ ಸಚಿವರು, ಸಂಸದರು ಮತ್ತು ಬಿಜೆಪಿ ಹಿರಿಯರು ಸಂಸತ್ ಭವನಕ್ಕೆ ಬಂದಿದ್ದರು.
ಜೆಡಿಯು ರಾಷ್ಟ್ರೀಯ ಅಧ್ಯಕ್ಷ ರಾಜೀವ್ ರಂಜನ್ ಸಿಂಗ್ ಮತ್ತು ಅಪ್ನಾ ದಳದ ಅನುಪ್ರಿಯಾ ಪಟೇಲ್ ಸೇರಿದಂತೆ ಎನ್‌ಡಿಎ ಮೈತ್ರಿಕೂಟದ ನಾಯಕರೂ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಮತ್ತೊಂದು ಗಮನಾರ್ಹ ಅಂಶವೆಂದರೆ, ಮುರ್ಮು ಅವರಿಗೆ ಬಿಜು ಜನತಾ ದಳ ಮತ್ತು ವೈಎಸ್‌ಆರ್ ಕಾಂಗ್ರೆಸ್ ಬೆಂಬಲ ಘೋಷಿಸಿದ್ದು, ನಾಮಪತ್ರ ಸಲ್ಲಿಕೆ ಸಮಯದಲ್ಲೂ ಈ ಪಕ್ಷಗಳ ಮುಖಂಡರು ಹಾಜರಿದ್ದರು.
ಮುರ್ಮು ಅವರ ನಾಮಪತ್ರಕ್ಕೆ ಸಹಿ ಹಾಕಲು ಬುಡಕಟ್ಟು ಸಮುದಾಯದ ಎನ್‌ಡಿಎ ಸಂಸದರನ್ನು ಕರೆತರಲಾಗಿತ್ತು. ಈ ಮೂಲಕ ಬಿಜೆಪಿ ರಾಜಕೀಯವಾಗಿಯೂ ಸಂದೇಶ ರವಾನಿಸಿದೆ. ರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಜೂನ್ 29 ಕೊನೆಯ ದಿನ. ಜುಲೈ 18ರಂದು ಮತದಾನ ನಡೆಯಲಿದ್ದು, ಜುಲೈ 21 ರಂದು ಮತ ಎಣಿಕೆ ಜರುಗಲಿದೆ. ವಿರೋಧ ಪಕ್ಷಗಳ ಅಭ್ಯರ್ಥಿಯಾಗಿ ಯಶವಂತ್ ಸಿನ್ಹಾ ಸ್ಪರ್ಧಿಸಿದ್ದಾರೆ.
ಇದನ್ನೂ ಓದಿ: Exclusive: ಬುಡಕಟ್ಟು ಜನರ ಏಳಿಗೆಗೆ ದ್ರೌಪದಿ ಮುರ್ಮು ಏನಾದರೂ ಮಾಡಿದ್ರೆ ಬಹಿರಂಗಪಡಿಸಲಿ - ಯಶವಂತ್ ಸಿನ್ಹಾ