ಲಖನೌ (ಉತ್ತರ ಪ್ರದೇಶ): ರಾಷ್ಟ್ರಪತಿ ರಾಮನಾಥ್ ಕೋವಿಂದ್ ತಾವು ತಿಂಗಳಿಗೆ 2.75 ಲಕ್ಷ ರೂ. ತೆರಿಗೆ ಪಾವತಿಸುವುದಾಗಿ ಹೇಳಿದ್ದಾರೆ. ‘ದೇಶದ ಮೊದಲ ಪ್ರಜೆಯಾಗಿರುವ ನಾನು ಮಾಸಿಕ 5 ಲಕ್ಷ ರೂ. ವೇತನ ಪಡೆಯುತ್ತೇನೆ, ಅದರಲ್ಲಿ 2.75 ಲಕ್ಷ ರೂ. ಹಣವನ್ನು ತೆರಿಗೆ ರೂಪದಲ್ಲಿ ಪಾವತಿಸುವುದಾಗಿ ಹೇಳಿದರು.
ತವರು ರಾಜ್ಯ ಉತ್ತರ ಪ್ರದೇಶಕ್ಕೆ ಮೂರು ದಿನಗಳ ಪ್ರವಾಸ ಕೈಗೊಂಡಿದ್ದ ರಾಷ್ಟ್ರಪತಿಗಳು ಕಾನ್ಪುರ್ ದೇಹತ್ ಜಿಲ್ಲೆಯ ಜಿನ್‌ಜಾಕ್ ರೈಲು ನಿಲ್ದಾಣದ ಸಮೀಪ ಶುಕ್ರವಾರ ಸ್ಥಳೀಯರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ವೇಳೆ ಈ ವಿಷಯ ತಿಳಿಸಿದ್ದಾರೆ.
ಕೋವಿಂದ್ ಜೂನ್ 25 ರಂದು ದೆಹಲಿಯ ಸಫ್ದರ್ಜಂಗ್ ರೈಲ್ವೆ ನಿಲ್ದಾಣದಿಂದ ವಿಶೇಷ ಅಧ್ಯಕ್ಷೀಯ ರೈಲಿನಲ್ಲಿ ಕಾನ್ಪುರಕ್ಕೆ ಪ್ರಯಾಣ ಬೆಳೆಸಿದರು. ಈ ರೈಲು ಕಾನ್ಪುರ್ ದೆಹತ್‌ನ ಜಿನ್‌ಜಾಕ್ ಮತ್ತು ರುರಾದಲ್ಲಿ ಎರಡು ಸ್ಟಾಪ್-ಓವರ್‌ಗಳನ್ನು ಮಾಡಿತು. ಅಲ್ಲಿ ರಾಷ್ಟ್ರಪತಿಗಳು ತಮ್ಮ ಹಳೆಯ ಪರಿಚಯಸ್ಥರೊಂದಿಗೆ ಸಂವಹನ ನಡೆಸಿದರು.
ದೇಶದಲ್ಲಿ ಅಭಿವೃದ್ಧಿ ಕೆಲಸಗಳು ನಡೆಯಬೇಕಾದರೆ ನಾಗರಿಕರು ಜವಾಬ್ದಾರಿಯುತವಾಗಿ ತೆರಿಗೆಯನ್ನು ಪಾವತಿಸಬೇಕು. ನಾನು ಕೂಡ ತಪ್ಪದೇ ತೆರಿಗೆಯನ್ನು ಕಟ್ಟುತ್ತೇನೆ ಎಂದು ರಾಷ್ಟ್ರಪತಿ ಕೋವಿಂದ್ ಹೇಳಿದ್ದಾರೆ.
ನಾವು–ನೀವು ತೆರಿಗೆ ಪಾವತಿಸಿದರೆ ಮಾತ್ರ ದೇಶದಲ್ಲಿ ಅಭಿವೃದ್ಧಿ ಕೆಲಸಗಳು ನಡೆಯಲು ಸಾಧ್ಯ ಎಂದು ಹೇಳುವ ಸಲುವಾಗಿ ಇಲ್ಲಿ ವೇತನದ ವಿಷಯವನ್ನು ಪ್ರಸ್ತಾಪ ಮಾಡಿದೆ. ತಿಂಗಳಿಗೆ 5 ಲಕ್ಷ ರೂ. ವೇತನ ಪಡೆಯುತ್ತೇನೆ. ಎಲ್ಲರೂ ದೊಡ್ಡ ಮೊತ್ತವೇ ಸ್ಯಾಲರಿಯಾಗಿ ಪಡೆಯುತ್ತಾರೆ ಎಂದುಕೊಳ್ಳುತ್ತಾರೆ. ಆದರೆ ನಾನು ಪ್ರತಿ ತಿಂಗಳು 2.75 ಲಕ್ಷ ರೂ. ತೆರಿಗೆ ಪಾವತಿಸುತ್ತೇನೆ ಎಂದಿದ್ದಾರೆ.
ತಿಂಗಳ ಸಂಬಳದಲ್ಲಿ ಅರ್ಧಕ್ಕಿಂತ ಹೆಚ್ಚು ನಾನು ತೆರಿಗೆ ಕಟ್ಟುತ್ತೇನೆ. ನನಗಿಂತ ನಮ್ಮ ಅಧಿಕಾರಿಗಳು ಹೆಚ್ಚು ಉಳಿತಾಯ ಮಾಡುತ್ತಾರೆ ಎಂದು ಕೋವಿಂದ್ ಹಾಸ್ಯ ಚಟಾಕಿ ಹಾರಿಸಿದ್ದಾರೆ.