ಕಾನ್ಪುರ (ಉತ್ತರ ಪ್ರದೇಶ): ಅಯೋಧ್ಯೆಯ ರಾಮ ಮಂದಿರದಲ್ಲಿ ಜನವರಿ 22ರಂದು 'ರಾಮಲಲ್ಲಾ' ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಸಮಾರಂಭ ನಿಗದಿಯಾಗಿದೆ. ಈ ದಿನವನ್ನು ಹಬ್ಬವನ್ನಾಗಿ ಆಚರಿಸುವಂತೆ ಹಿಂದೂ ಸಂಘಟನೆಗಳು ಈಗಾಗಲೇ ಭಕ್ತರಿಗೆ ಕರೆ ನೀಡಲು ಪ್ರಾರಂಭಿಸಿವೆ. ಇದರ ನಡುವೆ ಉತ್ತರ ಪ್ರದೇಶದ ಅನೇಕ ಗರ್ಭಿಣಿಯರು ಆ ದಿನದಂದೇ ತಮ್ಮ ಹೆರಿಗೆಗೆ ಆದ್ಯತೆ ನೀಡುತ್ತಿದ್ದಾರೆ.
ರಾಜ್ಯದ ಮಹಿಳೆಯರು ತಮ್ಮ ಮಕ್ಕಳಿಗೆ ಜನ್ಮ ನೀಡುವ ಮೂಲಕ ಈ ವಿಶೇಷ ದಿನವನ್ನು ಸ್ಮರಣೀಯವಾಗಿಸಲು ಬಯಸುತ್ತಿದ್ದಾರೆ. ಈ ದಿನ ತಮ್ಮ ಮಕ್ಕಳು ಹುಟ್ಟಿದರೆ, ತಮ್ಮ ಮನೆಯಲ್ಲಿ 'ರಾಮಲಲ್ಲಾ' ಮರುಜನ್ಮ ಪಡೆದಷ್ಟೇ ಒಳ್ಳೆಯದಾಗುತ್ತದೆ ಎಂದು ನಂಬುಗೆ ಹೊಂದಿದ್ದಾರೆ. ಇದಕ್ಕಾಗಿ ಈ ಗರ್ಭಿಣಿಯರು ವೈದ್ಯರಲ್ಲಿ ತಮ್ಮ ಹೆರಿಗೆಯನ್ನು ದೇವರ ಪ್ರಾಣ ಪ್ರತಿಷ್ಠಾಪನೆ ದಿನದಂದೇ ಮಾಡಬೇಕು ಎಂದು ಕೇಳಿಕೊಳ್ಳುತ್ತಿದ್ದಾರೆ.
ಈ ಟ್ರೆಂಡ್ ಈಗಾಗಲೇ ಕಾನ್ಪುರದಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದೆ. ಕೌಸಲ್ಯೆಯನ್ನು ನೆನಪಿಸಿಕೊಳ್ಳುತ್ತಾ ರಾಮನು ತಮ್ಮ ಮನೆಯಲ್ಲಿಯೂ ಹುಟ್ಟಲಿ ಎಂದು ಇಚ್ಛಿಸುತ್ತಿದ್ದಾರೆ. ಈ ಕುರಿತ ಕೆಲ ಮಹಿಳೆಯರ ಮಾತುಗಳನ್ನು ಕೇಳಿದ ನಂತರ ವೈದ್ಯರೇ ಆಶ್ಚರ್ಯ ಪಟ್ಟಿದ್ದಾರೆ. ಆರೋಗ್ಯವಂತ ಮತ್ತು ಆರೋಗ್ಯಕರವಾಗಿರುವ ಗರ್ಭಿಣಿಯರಿಗೆ ಜನವರಿ 22ರಂದು ಹೆರಿಗೆಗೆ ಶಸ್ತ್ರಚಿಕಿತ್ಸೆ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ.
'ಈಟಿವಿ ಭಾರತ್' ಜೊತೆ ಹಿರಿಯ ವೈದ್ಯೆ ಸೀಮಾ ದ್ವಿವೇದಿ ಮಾತನಾಡಿ, ''ಸಾಮಾನ್ಯವಾಗಿ ಆಸ್ಪತ್ರೆಯಲ್ಲಿ ಪ್ರತಿದಿನ 15 ರಿಂದ 20 ಹೆರಿಗೆಗಳು ನಡೆಯುತ್ತಿವೆ. ಜನವರಿ 22ರಂದು ನಾವು ಹೆಚ್ಚಿನ ಶಸ್ತ್ರಚಿಕಿತ್ಸೆಗಳನ್ನು ಮಾಡಬೇಕಾದರೆ, ನಾವು ಇದಕ್ಕೂ ಸಿದ್ಧರಿದ್ದೇವೆ. ಆದರೆ, ''ರೋಗಿಗಳ ಆರೋಗ್ಯ ಸ್ಥಿತಿ ನೋಡಬೇಕು. ಈ ಹೆರಿಗೆಯ ಸಮಯದಲ್ಲಿ ಗರ್ಭಿಣಿಯರಿಗೆ ಯಾವುದೇ ತೊಂದರೆಯಾಗದಂತೆ ವಿಶೇಷ ಕಾಳಜಿ ವಹಿಸುವುದ ಮುಖ್ಯ'' ಎಂದು ಹೇಳಿದರು.
ಕುಟುಂಬದವರೂ ಹಾರೈಕೆ: ಜನವರಿ 22 ಐತಿಹಾಸಿಕ ದಿನವಾಗಲಿದೆ. ಅಂದು ನಮ್ಮ ಇಡೀ ಕುಟುಂಬವು ಭಗವಾನ್ ರಾಮನ ರೂಪದಲ್ಲಿ ಒಂದು ಮಗು ತಮ್ಮ ಮನೆಯಲ್ಲಿಯೂ ಜನಿಸಬೇಕೆಂದು ಬಯಸುತ್ತದೆ ಎಂದು ಆಸ್ಪತ್ರೆಯಲ್ಲಿ ದಾಖಲಾಗಿರುವ ಗರ್ಭಿಣಿಯೊಬ್ಬರು ಅತ್ತೆ ಹೇಳಿದರು. ಹೀಗಾಗಿ, ಜನವರಿ 22ರಂದು ತಮ್ಮ ಸೊಸೆಗೆ ಆಪರೇಷನ್ ಹೋಗಬೇಕೆಂದು ಅವರು ಬಯಸಿದ್ದಾರೆ. ಇದಕ್ಕಾಗಿ ಅವರ ಮನೆಯವರು ವೈದ್ಯರ ಬಳಿಯೂ ಮಾತನಾಡಿದ್ದಾರೆ.
ಭವ್ಯ ರಾಮ ಮಂದಿರ ನಿರ್ಮಾಣವಾಗುತ್ತಿದ್ದು, ಜನವರಿ 22ರಂದು 51 ಇಂಚು ಎತ್ತರದ 5 ವರ್ಷದ ರಾಮಲಲ್ಲಾ ವಿಗ್ರಹವನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ಜನವರಿ 16 ರಿಂದ ಮಹಾಮಸ್ತಕಾಭಿಷೇಕ ಪ್ರಾರಂಭವಾಗಲಿದ್ದು, ಏಳು ದಿನಗಳ ಕಾಲ ನಡೆಯಲಿದೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಹೇಳಿದೆ.
ಇದನ್ನೂ ಓದಿ: ರಾಮ ಮಂದಿರ ಉದ್ಘಾಟನೆ: ಬಾಬರಿ ಮಸೀದಿ ಪರ ಹೋರಾಟಗಾರ ಅನ್ಸಾರಿಗೆ ಆಮಂತ್ರಣ