ಪ್ರಯಾಗರಾಜ್ (ಉತ್ತರ ಪ್ರದೇಶ): ದಲಿತ ಮಹಿಳೆಯೊಬ್ಬರ ಮೇಲೆ ಅತ್ಯಾಚಾರವೆಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಪೊಲೀಸ್ ಸಬ್ ಇನ್‌ಸ್ಪೆಕ್ಟರ್‌ನನ್ನು ಅಮಾನತು ಮಾಡಲಾಗಿದೆ ಎಂದು ಮಂಗಳವಾರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಝಂಘೈ ಪೊಲೀಸ್ ಹೊರಠಾಣೆ ಉಸ್ತುವಾರಿ ಸುಧೀರ್ ಕುಮಾರ್ ಪಾಂಡೆ ಸೆಪ್ಟೆಂಬರ್ 21 ರಂದು ತನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಸಂತ್ರಸ್ತೆ ನೀಡಿದ್ದ ದೂರಿನಲ್ಲಿ ಆರೋಪಿಸಿದ್ದಾಳೆ ಎಂದು ಹಂಡಿಯಾದ ಸಹಾಯಕ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ಹೇಳಿದ್ದಾರೆ.
ಮಹಿಳೆಯ ದೂರಿನ ಆಧಾರದ ಮೇಲೆ ಸರಾಯಿ ಮಾಮ್ರೇಜ್ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ಆಗಿರುವ ಪಾಂಡೆ ವಿರುದ್ಧ ಐಪಿಸಿ ಸೆಕ್ಷನ್ 376 (ಅತ್ಯಾಚಾರ) ಮತ್ತು 120 ಬಿ (ಕ್ರಿಮಿನಲ್ ಪಿತೂರಿ) ಮತ್ತು ಎಸ್‌ಸಿ/ಎಸ್‌ಟಿ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಸದ್ಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಪಾಂಡೆ ತಲೆಮರೆಸಿಕೊಂಡಿದ್ದಾನೆ.
ಪೊಲೀಸ್ ಮೂಲಗಳ ಪ್ರಕಾರ, ಮಹಿಳೆಗೆ ಕೆಲವು ಪುರುಷರು ಕಿರುಕುಳ ನೀಡುತ್ತಿದ್ದರು. ಜೊತೆಗೆ ಕೊಲೆ ಬೆದರಿಕೆ ಹಾಕುತ್ತಿದ್ದರು. ಸೆಪ್ಟೆಂಬರ್ 21 ರಂದು ಸಂಜೆ ಸಬ್ ಇನ್ಸ್ಪೆಕ್ಟರ್ ಪಾಂಡೆ ಆಕೆಯನ್ನು ಪೊಲೀಸ್ ಔಟ್‌ಪೋಸ್ಟ್ ಠಾಣಗೆ ಕರೆದಿದ್ದ. ಪುರುಷರನ್ನು ಬಂಧಿಸಲು ಹೋಗುವ ನೆಪದಲ್ಲಿ ಆಕೆಯನ್ನು ಕಾರಿನಲ್ಲಿ ಕರೆದೊಯ್ದು ಮತ್ತು ಬರುವ ಔಷಧವನ್ನು ಬೆರೆಸಿದ ತಂಪು ಪಾನೀಯವನ್ನು ಮಹಿಳೆಗೆ ನೀಡಿದ್ದಾನೆ. ನಂತರ, ಆಕೆ ಪ್ರಜ್ಞೆ ತಪ್ಪಿ ಬಿದ್ದಿದ್ದಾಗ ಅತ್ಯಾಚಾರ ಎಸಗಿದ್ದಾನೆ. ಈ ಬಗ್ಗೆ ತನಿಖೆ ನಡೆಸುವಂತೆ ಪೊಲೀಸ್ ಕಮಿಷನರ್ ರಮಿತ್ ಶರ್ಮಾ ಅವರು, ಹಂಡಿಯಾ ಎಸಿಪಿ ಸುಧೀರ್ ಕುಮಾರ್ ಅವರಿಗೆ ಸೂಚಿಸಿದ್ದಾರೆ.
ಮಹಿಳಾ ಸೆಕ್ಯುರಿಟಿ ಗಾರ್ಡ್ ಮೇಲೆ ಅತ್ಯಾಚಾರಕ್ಕೆ ಯತ್ನ: ಹರಿಯಾಣದ ಗುರುಗ್ರಾಮ್ ಸೆಕ್ಟರ್ 92ರಲ್ಲಿ ಸೊಸೈಟಿಯ ಮಹಿಳಾ ಸೆಕ್ಯುರಿಟಿ ಗಾರ್ಡ್ ಮೇಲೆ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ನಡೆದಿದೆ. ಜೊತೆಗೆ ಹರಿತವಾದ ವಸ್ತುವಿನಿಂದ ಹಲ್ಲೆ ನಡೆಸಲಾಗಿದೆ ಎಂದು ಮಂಗಳವಾರ ಪೊಲೀಸರು ತಿಳಿಸಿದ್ದಾರೆ. ಮಹಿಳೆಗೆ ಗಂಭೀರ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಗಳವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಮಹಿಳೆ ತನ್ನ ಪತಿಯೊಂದಿಗೆ ತನ್ನ ಫ್ಲಾಟ್‌ನಲ್ಲಿ ಒಬ್ಬಳೇ ಇದ್ದಾಗ ಈ ಘಟನೆ ನಡೆದಿದೆ. ಸಂತ್ರಸ್ತೆಯ ದೂರಿನ ಮೇರೆಗೆ ಕಾವಲುಗಾರ ವಿಷ್ಣು ವಿರುದ್ಧ ಸೆಕ್ಷನ್ 376/511 (ಅತ್ಯಾಚಾರ ಯತ್ನ), 354 ಎ (ಲೈಂಗಿಕ ಕಿರುಕುಳ), 323 (ಗಾಯ ಉಂಟುಮಾಡುವುದು), 452 (ಮನೆಗೆ ನುಗ್ಗುವುದು), ಮತ್ತು 506 (ಕ್ರಿಮಿನಲ್ ಬೆದರಿಕೆ ಹಾಕುವುದು) ಐಪಿಸಿ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
"ಆರೋಪಿಯನ್ನು ಸೆರೆಹಿಡಿಯಲು ನಾವು ಮೂರು ವಿಶೇಷ ತಂಡಗಳನ್ನು ರಚಿಸಿದ್ದೇವೆ. ಸಿಬ್ಬಂದಿ ಆರೋಪಿಗಳನ್ನು ಹಿಡಿಯಲು ದಾಳಿ ನಡೆಸುತ್ತಿದ್ದಾರೆ. ಒಂದು ತಂಡವು ಆರೋಪಿಯ ಸ್ಥಳವಾದ ಮಹುವಾಗೆ ತೆರಳಿದೆ. ಶೀಘ್ರದಲ್ಲೇ ಅವರನ್ನು ಬಂಧಿಸಲಾಗುವುದು" ಎಂದು ಸೆಕ್ಟರ್ 10ಎ ಪೊಲೀಸ್ ಠಾಣೆ ಎಸ್‌ಎಚ್‌ಒ ವೇದ್ ಪ್ರಕಾಶ್ ಮಾಹಿತಿ ನೀಡಿದ್ದಾರೆ.
ಮಥುರಾದಲ್ಲಿ ದಲಿತ ಬಾಲಕಿಯ ಮೇಲೆ ಅತ್ಯಾಚಾರ: ಉತ್ತರ ಪ್ರದೇಶದ ಮಥುರಾದಲ್ಲಿ ಎಂಟು ವರ್ಷದ ದಲಿತ ಬಾಲಕಿಯೊಬ್ಬಳು ಸಂಬಂಧಿಕರೊಬ್ಬರ ಮನೆಯಿಂದ ತಮ್ಮ ಮನೆಗೆ ಮರಳುತ್ತಿದ್ದಾಗ ಅಪರಿಚಿತ ವ್ಯಕ್ತಿಯೊಬ್ಬ ಅತ್ಯಾಚಾರವೆಸಗಿದ್ದಾನೆ. ಮಹಾವನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ರಾತ್ರಿ 8.30ಕ್ಕೆ ಈ ಘಟನೆ ನಡೆದಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಬಾಲಕಿಯ ತಂದೆ ನೀಡಿದ ಪೊಲೀಸ್ ದೂರಿನ ಪ್ರಕಾರ, ಬಾಲಕಿ ಭಾನುವಾರ ತಮ್ಮ ಗ್ರಾಮದ ಸಂಬಂಧಿಕರ ಮನೆಯಿಂದ ಹೋಗಿದ್ದರು. ಆಕೆ ತಮ್ಮ ಮನೆಗೆ ಹಿಂದಿರುಗುತ್ತಿದ್ದಾಗ, ಅಪರಿಚಿತ ವ್ಯಕ್ತಿಯೊಬ್ಬ ಆಕೆಗೆ ಟೋಫಿ ನೀಡುವ ನೆಪದಲ್ಲಿ ಆಕೆಯನ್ನು ಏಕಾಂತ ಸ್ಥಳಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಮನೆ ಬಂದ ನಂತರ ಆಕೆಯನ್ನು ತಕ್ಷಣ ಜಿಲ್ಲಾಸ್ಪತ್ರೆಗೆ ಕರೆದೊಯ್ದು, ಪ್ರಥಮ ಚಿಕಿತ್ಸೆ ನೀಡಿ ನಂತರ ಆಗ್ರಾದ ಎಸ್.ಎನ್. ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಯಿತು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಗ್ರಾಮೀಣ) ತ್ರಿಗುನ್ ಬಿಸೆನ್ ತಿಳಿಸಿದ್ದಾರೆ. ಬಾಲಕಿಯ ತಂದೆ ನೀಡಿದ ದೂರಿನ ಆಧಾರದ ಮೇಲೆ, ಈ ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಮತ್ತು ಆರೋಪಿಯನ್ನು ಪತ್ತೆಹಚ್ಚಲು ಪ್ರಯತ್ನಿಸಲಾಗುತ್ತಿದೆ ಎಂದು ಅವರು ಹೇಳಿದರು.
ನೋಯ್ಡಾದಲ್ಲಿ ಫ್ಯಾಷನ್ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ, ಸ್ನೇಹಿತ ಬಂಧನ: ಉತ್ತರ ಪ್ರದೇಶದ ನೊಯ್ಡಾದಲ್ಲಿ ಸ್ನೇಹಿತನೊಬ್ಬ ತನ್ನ ಮನೆಯಲ್ಲಿ ಮದ್ಯ ಸೇವಿಸಿ, 20 ವರ್ಷದ ಫ್ಯಾಷನ್ ಡಿಸೈನಿಂಗ್ ವಿದ್ಯಾರ್ಥಿನಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ್ದಾನೆ. ಆರೋಪಿ, 23 ವರ್ಷದ ಖಾಸಗಿ ಸಂಸ್ಥೆಯ ಉದ್ಯೋಗಿಯನ್ನು ಮಂಗಳವಾರ ಬಂಧಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಭಾನುವಾರ ನಡೆದ ಘಟನೆಯ ಬಗ್ಗೆ ವಿದ್ಯಾರ್ಥಿಯ ತಂದೆ ಸ್ಥಳೀಯ ಸೆಕ್ಟರ್ 58 ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಐಪಿಸಿ ಸೆಕ್ಷನ್ 328 (ನೋಯಿಸುವ ಉದ್ದೇಶದಿಂದ ಮಾದಕ ದ್ರವ್ಯ ಸೇವನೆ), 376 (ಅತ್ಯಾಚಾರ), 120 ಬಿ (ಅಪರಾಧದ ಪಿತೂರಿ) ಮತ್ತು 506 (ಅಪರಾಧ ಬೆದರಿಕೆ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಆರೋಪಿಯನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಕ್ಷುಲ್ಲಕ ಕಾರಣಕ್ಕೆ ಇಬ್ಬರ ಭೀಕರ ಕೊಲೆ: ಬೆಳಗಾವಿ-ಹುಬ್ಬಳ್ಳಿಯಲ್ಲಿ ಪ್ರತ್ಯೇಕ ಘಟನೆ