ಪ್ರಯಾಗರಾಜ್: ಉತ್ತರಪ್ರದೇಶದ ಹಲವೆಡೆ ಮಳೆಯಾಗುತ್ತಿರುವುದರಿಂದ ದಿನೇದಿನೆ ಗಂಗಾ ನದಿಯ ನೀರಿನ ಪ್ರಮಾಣ ಹೆಚ್ಚಾಗುತ್ತಿದೆ. ಇದರಿಂದಾಗಿ ಪಕ್ಕದಲ್ಲಿರುವ ಫಫಮೌ ಘಾಟ್‌ಗೆ ನದಿಯ ನೀರಿನ ಅಲೆಗಳು ಜೋರಾಗಿ ಅಪ್ಪಳಿಸುತ್ತಿದ್ದು, ನದಿ ತೀರದಲ್ಲಿ ಸವೆತ ಉಂಟಾಗಿದೆ.
ಕಳೆದ ಒಂದೂವರೆ ತಿಂಗಳಿಂದ ಮೃತಪಟ್ಟಿದ್ದ ಕೋವಿಡ್ ರೋಗಿಗಳನ್ನು ದಡದಲ್ಲಿಯೇ ಸಮಾಧಿ ಮಾಡಿದ್ದರಿಂದ, ಹೆಣಗಳು ತೇಲಿ ಬರುವ ಸಾಧ್ಯತೆಯಿದೆ. ಒಂದು ವೇಳೆ ಶವಗಳು ತೇಲಿ ಬಂದರೆ ಮಾಲಿನ್ಯ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಹಾಗಾಗಿ ಜಿಲ್ಲಾಡಳಿತವು ಈಗಾಗಲೇ ಹೂಳಲಾಗಿರುವ ಮೃತದೇಹಗಳನ್ನು ಹೊರತೆಗೆದು ವಿಲೇವಾರಿ ಮಾಡಲು ಮುಂದಾಗಿದೆ.
ಜಿಲ್ಲೆಯಲ್ಲಿ ಫಫಮೌ, ಶ್ರೀಂಗ್ವರ್ಪುರ್ ಮತ್ತು ದಿಯೋರಖ್ ಘಾಟ್ ಪ್ರಮುಖ ಸ್ಮಶಾನಗಳಾಗಿವೆ. ಸ್ಥಳೀಯ ಸರ್ಕಾರಿ ಸಂಸ್ಥೆಗಳು ಘಟ್ಟಗಳ ಮೇಲೆ ಸಮಾಧಿ ಮಾಡುವುದನ್ನು ನಿಷೇಧಿಸಿದೆ. ಹಾಗಾಗಿ ಮೃತದೇಹಗಳನ್ನು ಸುಡಲು ಜಿಲ್ಲಾಡಳಿತ ಮುಂದಾಗಿದೆ.
ನದಿ ತೀರದಲ್ಲಿ ಎಸ್ಡಿಆರ್ಎಫ್ ಮತ್ತು ವಾಟರ್ ಪೊಲೀಸರ ತಂಡವನ್ನು ನಿಯೋಜಿಸಲಾಗಿದೆ. ನದಿಯಲ್ಲಿ ನೀರಿನ ಮಟ್ಟ ಏರುತ್ತಿರುವುದರಿಂದ ಅಲ್ಲಿದ್ದ ಅಂಗಡಿಗಳನ್ನೂ ಎತ್ತಂಗಡಿ ಮಾಡಿಸಲಾಗಿದೆ.
ಈಗಾಗಲೇ ಹತ್ತಾರು ಹೆಣಗಳು ನದಿಯಲ್ಲಿ ತೇಲಿ ಬರುತ್ತಿದ್ದು, ಪಕ್ಷಿಗಳು, ನಾಯಿಗಳು ತಿನ್ನುತ್ತಿವೆ. ದುರ್ವಾಸನೆಯಿಂದಾಗಿ ಭಕ್ತರು ಸ್ನಾನ ಮಾಡುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ:VIDEO: ಕಾಗೆಗಳಿಂದ ತಪ್ಪಿಸಿಕೊಳ್ಳುವಾಗ ಹೈವೋಲ್ಟೇಜ್ ತಂತಿಗೆ ಡಿಕ್ಕಿ ಹೊಡೆದ ಕೋತಿ
ಈ ಮೊದಲು ಶವಗಳನ್ನು ಗಂಗಾ ತೀರದಲ್ಲಿ ಹೂಳಲಾಗಿತ್ತು. ಆದರೆ, ಇತ್ತೀಚೆಗೆ ಕೋವಿಡ್ನಿಂದ ಮೃತಪಟ್ಟ ಸಾವಿರಾರು ಹೆಣಗಳನ್ನು ಇಲ್ಲಿ ಹೂಳಲಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.