ಹೈದರಾಬಾದ್: ಭಾರತೀಯ ಚಿತ್ರರಂಗದ ಪ್ರತಿಭಾನ್ವಿತ ನಟ ಪ್ರಕಾಶ್ ರೈ ಕನ್ನಡ, ಹಿಂದಿ, ಮಲಯಾಳಂ, ತಮಿಳು, ತೆಲುಗಿನ ಸಿನಿಮಾಗಳಲ್ಲಿ ನಟಿಸಿ ಜನರ ಮನಸ್ಸು ಗೆದ್ದಿದ್ದಾರೆ. ಇದೀಗ ಟಾಲಿವುಡ್ನ ಮೂವಿ ಆರ್ಟಿಸ್ಟ್ ಅಸೋಸಿಯೇಷನ್ (MAA) ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಪ್ರಕಾಶ್ ರೈ ತೀರ್ಮಾನಿಸಿದ್ದಾರೆ. ಆದರೆ, ತೆಲುಗು ಚಿತ್ರರಂಗದ ಕೆಲವರು ಪ್ರಕಾಶ್ ರೈ ನಮ್ಮವನಲ್ಲ, ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.
‘ನಾನು ಸ್ಥಾನಕ್ಕಾಗಿ ಸ್ಪರ್ಧಿಸ್ತಿಲ್ಲ’
ಇದಕ್ಕೆ ಪ್ರತಿಕ್ರಿಯಿಸಿರುವ ನಟ ಪ್ರಕಾಶ್ ರೈ, ಎಲೆಕ್ಷನ್ನಲ್ಲಿ ಸ್ಪರ್ಧಿಸಬೇಕೆಂದು ನಾನು ಏಕಾಏಕಿ ನಿರ್ಧಾರ ತೆಗೆದುಕೊಂಡವನಲ್ಲ. ಎರಡು ವರ್ಷಗಳ ಹಿಂದಿನಿಂದಲೂ ಆಲೋಚಿಸಿ ತೀರ್ಮಾನ ಕೈಗೊಂಡಿದ್ದೇನೆ. ಚಿತ್ರರಂಗದಲ್ಲಿನ ಸಮಸ್ಯೆ ಪರಿಹರಿಸಲು ಯಾವ ಕ್ರಮಕೈಗೊಳ್ಳಬೇಕು ಅನ್ನೋದಕ್ಕೆ ನಾನೊಂದು ಯೋಜನೆ ಸಿದ್ಧಪಡಿಸಿದ್ದೇನೆ. ನಾನು ಸ್ಥಾನಕ್ಕಾಗಿ ಸ್ಪರ್ಧಿಸುತ್ತಿಲ್ಲ. ಚಿತ್ರರಂಗದಲ್ಲಿ ಉತ್ತಮ ಕೆಲಸಗಳನ್ನು ಮಾಡುವ ಸಲುವಾಗಿ ಸ್ಪರ್ಧಿಸುತ್ತಿದ್ದೇನೆ. ನಾನು ಏನೇ ತಪ್ಪು ಮಾಡಿದರೂ, ಪ್ರಶ್ನಿಸುವ ಹಕ್ಕು ಮೋಹನ್‌ಬಾಬು, ಚಿರಂಜೀವಿ, ನಾಗಾರ್ಜುನ ಸೇರಿ ಹಲವರಿಗಿದೆ ಎಂದಿದ್ದಾರೆ.
‘ನನ್ನ ಆಧಾರ್ನ ವಿಳಾಸ ಹೈದರಾಬಾದ್’
ತೆಲಂಗಾಣದಲ್ಲಿ ಒಂದು ಹಳ್ಳಿಯನ್ನು ದತ್ತು ಪಡೆದುಕೊಂಡಾಗ ಯಾರೂ ಕೂಡ ನಾನು ಸ್ಥಳೀಯನಲ್ಲ ಎಂದು ಹೇಳಲಿಲ್ಲ. ನನ್ನ ಸಹಾಯಕರಿಗಾಗಿ ನಾನು ಹೈದರಾಬಾದ್ನಲ್ಲಿ ಮನೆ ಖರೀದಿಸಿದೆ. ನನ್ನ ಮಗ ಹೈದರಾಬಾದ್ನ ಶಾಲೆಗೆ ಹೋಗುತ್ತಾನೆ. ನನ್ನ ಆಧಾರ್ ವಿಳಾಸ ಕೂಡ ಹೈದರಾಬಾದ್ನದ್ದಿದೆ. ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಕ್ಕೆ ನನಗೆ ರಾಜ್ಯ ಪ್ರಶಸ್ತಿ, ರಾಷ್ಟ್ರ ಪ್ರಶಸ್ತಿ ಬಂದಿವೆ. ಈ ಯಾವುದೇ ವಿಚಾರಗಳಿಗೆ ನಾನು ಹೊರಗಿನವನು ಎಂಬುದು ಅಡ್ಡ ಬರಲಿಲ್ಲ. ಈಗ ಯಾಕೆ ಪ್ರಶ್ನೆ ಎದ್ದಿದೆ? ನಾನು ಸ್ಥಳೀಯನಲ್ಲ ಎಂದು ಕೇಳುವವರ ಸಂಕುಚಿತ ಮನೋಭಾವವನ್ನು ಇದು ತೋರಿಸುತ್ತದೆ ಎಂದು ಪ್ರಕಾಶ್ ರೈ ಹೇಳಿದ್ದಾರೆ.
‘ಆರೋಪಿಸೋದು ಸುಲಭ’
ಮೂರು ದಶಕಗಳಿಂದ ನಾನು ಈ ಚಿತ್ರರಂಗದಲ್ಲಿ ಇದ್ದೇನೆ. ಸದ್ಯದ ಬೆಳವಣಿಗೆಗಳ ಬಗ್ಗೆ ನನಗೆ ಸಮಾಧಾನವಿಲ್ಲ. ದೂಷಣೆ ಮಾಡುವುದು ಸುಲಭ. ಆದರೆ, ಪರಿಹಾರ ಕಂಡು ಕೊಳ್ಳುವುದು ಮುಖ್ಯ. ಅಧ್ಯಕ್ಷನಾಗಲು ನಾನು ಸೂಕ್ತ ಎಂದು ನನ್ನ ಸಹ-ಕಲಾವಿದರು ಹೇಳಿದರು. ಕಳೆದ ವರ್ಷದ ಘಟನೆಗಳನ್ನು ನೋಡಿದ ಬಳಿಕ ನಾನು ಈ ತೀರ್ಮಾನಕ್ಕೆ ಬಂದೆ ಎಂದು ಪ್ರಕಾಶ್ ರಾಜ್ ಅವರು ಸ್ಪಷ್ಟಪಡಿಸಿದ್ದಾರೆ.