ತಿರುನೆಲ್ವೆಲಿ (ತಮಿಳುನಾಡು): ಕಳೆದ 6 ತಿಂಗಳಿನಿಂದ ಇಲ್ಲಿನ ಪೋಸ್ಟ್ ಮಾಸ್ಟರ್ ಕ್ರಿಸ್ತುರಾಜ ಎಂಬವರು ಪಶ್ಚಿಮ ಘಟ್ಟಗಳ ಮೂಲಕ ಸುಮಾರು 25 ಕಿ.ಮೀ ದೂರ ಸಾಗಿ ಇಂಜಿಕ್ಕುಳಿ ಎಂಬ ಕುಗ್ರಾಮದಲ್ಲಿ ನೆಲೆಸಿರುವ ವೃದ್ಧೆಗೆ ಸರ್ಕಾರದಿಂದ ಬರುವ ವೃದ್ಧಾಪ್ಯ ವೇತನವನ್ನು ನೀಡುತ್ತಿದ್ದಾರೆ.
ಕಲಕ್ಕಾಡ್ ಮುಂಡಂತುರೈ ಹುಲಿ ರಕ್ಷಿತಾರಣ್ಯದ ದಟ್ಟವಾದ ಕಾಡಿಗೆ ಸಮೀಪವಿರುವ ಇಂಜಿಕ್ಕುಳಿ ಎಂಬ ಗ್ರಾಮದಲ್ಲಿ ವೃದ್ಧೆ ವಾಸವಾಗಿದ್ದಾರೆ. ಈ ಅಜ್ಜಿಗೆ ವೃದ್ಧಾಪ್ಯ ವೇತನ ನೀಡಬೇಕಾದರೆ ಇದೇ ಕಾಡಿನ ಮೂಲಕ ಸಾಗಬೇಕಾಗಿದೆ. ಆ ಸ್ಥಳಕ್ಕೆ ತೆರಳಬೇಕಾದ ಮುನ್ನಾ ದಿನ ಕ್ರಿಸ್ತುರಾಜ ಅವರು 500 ರೂ.ಖರ್ಚು ಮಾಡಿ ಡೀಸೆಲ್ ಖರೀದಿಸುತ್ತಾರೆ. ಆ ಬಳಿಕ ದೋಣಿಯ ಮೂಲಕ ನದಿ ದಾಟಿ ವೃದ್ಧೆಯಿರುವ ಸ್ಥಳಕ್ಕೆ ತೆರಳುತ್ತಾರೆ. ದೋಣಿಯ ಮೂಲಕ ತೆರಳಿದರೆ 8 ಕಿ.ಮೀ ದೂರ ಸಾಗುವ ಅವಶ್ಯಕತೆ ತಪ್ಪುತ್ತದೆಯಂತೆ. ಒಂದು ವೇಳೆ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾದರೆ ಸುತ್ತುವರೆದು ಆ ಪ್ರದೇಶಕ್ಕೆ ಸಾಗಬೇಕಾದ ಪರಿಸ್ಥಿತಿ ಇದೆ.
ವೃದ್ಧಾಪ್ಯ ವೇತನ ಸ್ವೀಕರಿಸುವವರ ಹೆಸರು ಕುಟ್ಟಿಯಮ್ಮಾಳ್. ಅರಣ್ಯ ಇಲಾಖೆಯ ಮಾಹಿತಿ ಪ್ರಕಾರ ಇವರ ಅಂದಾಜು ವಯಸ್ಸು 105 ವರ್ಷ. ತಿರುನೆಲ್ವೇಲಿ ಕಲೆಕ್ಟರ್ ವಿ.ವಿಷ್ಣು ಇಂಜಿಕ್ಕುಳಿಗೆ ಆರು ತಿಂಗಳ ಹಿಂದೆ ಭೇಟಿ ನೀಡಿದಾಗ ತಮಗೆ ಹಣಕಾಸಿನ ನೆರವು ನೀಡುವಂತೆ ವೃದ್ಧೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಅವರಿಗೆ ತಕ್ಷಣವೇ ವೇತನವನ್ನು ಮಂಜೂರು ಮಾಡಲಾಗಿದೆ.
ಆದರೆ ಕುಟ್ಟಿಯಮ್ಮಾಳ್ ತನ್ನ ಹಣವನ್ನು ಪಡೆಯಲು ಹತ್ತಿರದ ಎಟಿಎಂಗೆ ಹೋಗಲು ಸಾಧ್ಯವಿಲ್ಲ. ಹೀಗಾಗಿ ಪಾಪನಾಶಂ ಶಾಖಾ ಅಂಚೆ ಕಚೇರಿಯ ಏಕೈಕ ಉದ್ಯೋಗಿ ಕ್ರಿಸ್ತುರಾಜಾ ಅವರು ಕಾಡಿನಲ್ಲಿ ವಾಸವಾಗಿರುವ ಈ ವೃದ್ಧೆಗೆ ಹಣವನ್ನು ತಲುಪಿಸುತ್ತಿದ್ದಾರೆ.
ಈ ಬಗ್ಗೆ ಮಾತನಾಡಿದ ಕ್ರಿಸ್ತುರಾಜ, "ನಾನು ಎಂದಿಗೂ ಈ ಕೆಲಸವನ್ನು ಹೊರೆಯೆಂದು ಪರಿಗಣಿಸುವುದಿಲ್ಲ. ಕೆಲಸದ ದಿನಗಳಲ್ಲಿ ಇಲ್ಲಿಗೆ ಆಗಮಿಸಿ ಹಣ ನೀಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ಭಾನುವಾರ ಅಥವಾ ರಜಾದಿನಗಳಲ್ಲಿ ಆಗಮಿಸುತ್ತೇನೆ. ನನ್ನ ಈ ಕಾರ್ಯಕ್ಕೆ ಕುಟುಂಬವೂ ಬೆಂಬಲ ನೀಡುತ್ತದೆ. ಆ ಶತಾಯುಷಿಗೆ ಹಣ ತಲುಪಿಸುವ ಕೆಲಸ ನನಗೆ ಸಂತೋಷ ತಂದಿದೆ" ಎಂದರು.