ಜಲಾಂಧರ್(ಪಂಜಾಬ್): ಜಿಲ್ಲೆಯ ದ್ರೋಲಿ ಖುರ್ದ್ ಗ್ರಾಮದಲ್ಲಿ ಒಂದೇ ಕುಟುಂಬದ ಐವರು ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಸಾಲಬಾಧೆಯಿಂದ ಬೇಸತ್ತು ಪೋಸ್ಟ್ಮಾಸ್ಟರ್ ಆಗಿದ್ದ ಕುಟುಂಬದ ಮುಖ್ಯಸ್ಥ ಮನಮೋಹನ್ ಸಿಂಗ್ ಎಂಬವರು ಮೊದಲು ಕುಟುಂಬದವರೆಲ್ಲರನ್ನೂ ಕೊಲೆಗೈದು, ಬಳಿಕ ತಾವೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಮೃತರನ್ನು ಮನಮೋಹನ್ ಸಿಂಗ್ (55), ಪತ್ನಿ ಸರಬ್ಜಿತ್ ಕೌರ್, ಇಬ್ಬರು ಪುತ್ರಿಯರಾದ ಜ್ಯೋತಿ (32) ಮತ್ತು ಗೋಪಿ (31) ಹಾಗು ಮತ್ತೊಬ್ಬರನ್ನು ಜ್ಯೋತಿ ಅವರ ಕಿರಿ ಮಗಳು ಅಮನ್ ಎಂದು ಗುರುತಿಸಲಾಗಿದೆ. ಮನಮೋಹನ್ ಸಿಂಗ್ ಅವರ ಅಳಿಯ ಫುಗ್ಲಾನಾ ನಿವಾಸಿ ಸರಬ್ಜಿತ್ ಸಿಂಗ್ ಎಂಬವರು ತಮ್ಮ ಪತ್ನಿಗೆ ಸಾಕಷ್ಟು ಬಾರಿ ದೂರವಾಣಿ ಕರೆ ಮಾಡಿದ್ದರೂ ಯಾರೂ ಪ್ರತಿಕ್ರಿಯಿಸದೇ ಇದ್ದಾಗ ಅವರಿಗೆ ಅನುಮಾನ ಮೂಡಿದೆ. ಗಾಬರಿಗೊಂಡು ಕೂಡಲೇ ದ್ರೋಲಿ ಖುರ್ದ್ ಗ್ರಾಮದಲ್ಲಿರುವ ತನ್ನ ಮಾವ ಮನೆಗೆ ಬಂದಿದ್ದಾರೆ. ಅಲ್ಲಿ ಮನಮೋಹನ್ ಮತ್ತು ಸರಬ್ಜಿತ್ ಕೌರ್ ಅವರ ಮೃತದೇಹಗಳೊಂದಿಗೆ ಕುಟುಂಬದ ಇತರ ಸದಸ್ಯರ ಶವಗಳನ್ನು ನೋಡಿ ಬೆಚ್ಚಿಬಿದ್ದಿದ್ದರು. ಕೂಡಲೇ ಈ ಮಾಹಿತಿಯನ್ನು ಪೊಲೀಸರಿಗೆ ರವಾನಿಸಿದ್ದಾರೆ.
ಆದಂಪುರ ಅಂಚೆ ಕಚೇರಿಯಲ್ಲಿ ಮನಮೋಹನ್ ಸಿಂಗ್ ಉಸ್ತುವಾರಿ ವಹಿಸಿದ್ದರು. ಘಟನೆಯ ಮಾಹಿತಿ ಪಡೆದ ಪೊಲೀಸ್ ಮುಖ್ಯಸ್ಥ ಮಂಜಿತ್ ಸಿಂಗ್ ಮತ್ತು ಆದಂಪುರದ ಡಿಎಸ್ಪಿ ವಿಜಯ್ ಕುನ್ವರ್ ಸಿಂಗ್ ರಾತ್ರಿ 8.20ಕ್ಕೆ ಸ್ಥಳಕ್ಕೆ ದೌಡಾಯಿಸಿದ್ದರು.
ಡೆತ್ನೋಟ್ ಪತ್ತೆ: "ಘಟನೆಯ ಕುರಿತು ತನಿಖೆ ನಡೆಯುತ್ತಿದೆ. ಡೆತ್ನೋಟ್ ಸಿಕ್ಕಿದೆ. ಮನಮೋಹನ್ ಸಿಂಗ್ ಆರ್ಥಿಕ ಸಂಕಷ್ಟದಿಂದ ಸಾಲ ಮಾಡಿರುವುದಾಗಿ ಬರೆದುಕೊಂಡಿದ್ದಾರೆ. ಅವರ ಕುಟುಂಬ ಸದಸ್ಯರು ಈ ಬಗ್ಗೆ ಮಾತನಾಡುತ್ತಿದ್ದರು. ಈ ಕುರಿತ ಕೌಟುಂಬಿಕ ಸಂಘರ್ಷದಿಂದ ಬೇಸತ್ತು ಸಾವಿನ ಕೈಗೊಂಡಿರುವುದಾಗಿ ಮನಮೋಹನ್ ಸಿಂಗ್ ಡೆತ್ನೋಟ್ನಲ್ಲಿ ತಿಳಿಸಿದ್ದಾರೆ" ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
"ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಜಲಂಧರ್ ಸಿವಿಲ್ ಆಸ್ಪತ್ರೆಗೆ ಕಳುಹಿಸಲಾಗಿದೆ. ಮೃತರ ಕುತ್ತಿಗೆಯ ಮೇಲೆ ಗಾಯದ ಗುರುತುಗಳಿವೆ. ಎಲ್ಲರೂ ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ಸಾಧ್ಯತೆ ಇದೆ" ಎಂದು ಅಧಿಕಾರಿ ಹೇಳಿದರು. ಮೂರು ವರ್ಷದ ಬಾಲಕಿಯ ಸಾವಿನ ಬಗ್ಗೆ ಕೇಳಿದಾಗ, "ಆಕೆಯ ಕುತ್ತಿಗೆಯ ಮೇಲೂ ಗುರುತುಗಳಿವೆ. ಕತ್ತು ಹಿಸುಕಿ ಸಾಯಿಸಿರಬಹುದು" ಎಂದು ಶಂಕೆ ವ್ಯಕ್ತಪಡಿಸಿದರು.
ಇದನ್ನೂ ಓದಿ: ರಸ್ತೆ ಅಪಘಾತ: ಬೆಂಗಳೂರಿನಲ್ಲಿ ಕಳೆದ ವರ್ಷ 909 ಸಾವು, ₹184 ಕೋಟಿ ದಂಡ ವಸೂಲಿ