ಕನೌಜ್ (ಉತ್ತರ ಪ್ರದೇಶ): ಅಪರೂಪದ ಪ್ರಕರಣದಲ್ಲಿ ಉತ್ತರ ಪ್ರದೇಶದ ಕನೌಜ್ ಆರಕ್ಷಕರು (ಪೊಲೀಸರು) ಆಪದ್ಬಾಂಧವರೂ ಆಗಿದ್ದಾರೆ. ಲೈಂಗಿಕ ದೌರ್ಜನ್ಯಕ್ಕೆ ಒಳಗಾದ 12 ವರ್ಷದ ಬಾಲಕಿಯ ಚಿಕಿತ್ಸೆಗಾಗಿ ಸ್ಥಳೀಯರೊಂದಿಗೆ ಸೇರಿಕೊಂಡು ಪೊಲೀಸರು 6 ಲಕ್ಷ ರೂಪಾಯಿ ಹಣ ಸಂಗ್ರಹಿಸಿದ್ದಾರೆ.
ಇಲ್ಲಿನ ಗುರುಸ್ಹೈಗಂಜ್ ಕೊಟ್ವಾಲಿ ಪ್ರದೇಶದಲ್ಲಿ ಅಕ್ಟೋಬರ್ 23ರಂದು ಹುಂಡಿ ಖರೀದಿಸಲೆಂದು ಮಾರುಕಟ್ಟೆಗೆ ಹೋಗಿದ್ದ 9ನೇ ತರಗತಿ ವಿದ್ಯಾರ್ಥಿನಿಯೊಬ್ಬಳು, ಅತಿಥಿ ಗೃಹದ ಬಳಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ನಂತರ ಆಕೆಯನ್ನು ಕಾನ್ಪುರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಂದ ಪೋಷಕರು ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದರು.
ಈ ವೇಳೆ ಬಾಲಕಿಯ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅಪರಿಚಿತ ವ್ಯಕ್ತಿಗಳ ವಿರುದ್ಧ ಅತ್ಯಾಚಾರ ಮತ್ತು ಅಪಹರಣ ಆರೋಪದ ಮೇಲೆ ಎಫ್‌ಐಆರ್ ದಾಖಲಾಗಿದೆ. ಬಾಲಕಿಯ ಚಿಕಿತ್ಸೆಗೆ ಪ್ರತಿದಿನ ಸುಮಾರು ಒಂದು ಲಕ್ಷ ರೂಪಾಯಿ ಖರ್ಚು ಆಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.
ಸದ್ಯ 60 ಗಂಟೆಗಳ ಕಾಲ ಐಸಿಯುನಲ್ಲಿರುವ ಸಂತ್ರಸ್ತೆಯ ಚಿಕಿತ್ಸೆಗೆ ಹಣ ಹೊಂದಿಸಲು ತಂದೆಗೆ ಸಾಧ್ಯವಾಗುತ್ತಿಲ್ಲ. ಈ ವಿಷಯ ಅರಿತ ಗುರುಸ್ಹೈಗಂಜ್ ಪೊಲೀಸ್ ಠಾಣೆಯ ಪ್ರಭಾರಿ ರಾಜ್‌ಕುಮಾರ್ ಸಹಾಯಹಸ್ತ ಚಾಚಿದ್ದಾರೆ. ಅಲ್ಲದೇ, ಸಾಮಾಜಿಕ ಕಾರ್ಯಕರ್ತರು ಸಹ ಈ ಕಾರ್ಯಕ್ಕೆ ಕೈ ಜೋಡಿಸಿದ್ದು, ಇದರಿಂದ ಒಟ್ಟಾರೆ ಆರು ಲಕ್ಷ ರೂಪಾಯಿಗೂ ಹೆಚ್ಚು ಹಣ ಸಂಗ್ರಹವಾಗಿದೆ. ಚಿಕಿತ್ಸೆ ನಂತರ ಉಳಿದ ಹಣವನ್ನು ಶಿಕ್ಷಣಕ್ಕೆ ಖರ್ಚು ಮಾಡಲು ನಿರ್ಧರಿಸಲಾಗಿದೆ.
ಮತ್ತೊಂದೆಡೆ, ಸಿಸಿಟಿವಿ ದೃಶ್ಯಾವಳಿಗಳ ಆಧಾರ ಮೇರೆಗೆ ಪೊಲೀಸರು, ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿಸಿದ ಓರ್ವ ಶಂಕಿತನನ್ನು ಗುರುತಿಸಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೇ, ಪೊಲೀಸರು ಆರೋಪಿ ಯುವಕನ ಓರ್ವ ಸಹೋದರನನ್ನು ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ.
ಇದನ್ನೂ ಓದಿ: ಎಲ್ಲ ಅತ್ಯಾಚಾರ ಪ್ರಕರಣಗಳಲ್ಲಿ ವೈದ್ಯಕೀಯ ಸಾಕ್ಷ್ಯ ಬೇಕಿಲ್ಲ: ಪೋಕ್ಸೋ ಕೋರ್ಟ್