ಚೆನ್ನೈ(ತಮಿಳುನಾಡು): ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿಯೊಂದಿಗೆ ಪ್ರೀತಿ-ಪ್ರೇಮದ ಆಟವಾಡಿದ ಶಿಕ್ಷಯೋರ್ವಳು ಬಳಿಕ ಆತನಿಗೆ ಪತ್ನಿಯೂ ಆಗಿದ್ದಾಳೆ. ಬಾಲಕನೊಂದಿಗೆ ವಿವಾಹವಾಗಿದ್ದ ಶಿಕ್ಷಕಿಗೆ ಇದೀಗ ಸಂಕಷ್ಟ ಎದುರಾಗಿದೆ. ಆಕೆ ವಿರುದ್ಧ ಪೋಕ್ಸೋ ಕಾಯ್ದೆಯಡಿ ಕೇಸ್ ದಾಖಲಾಗಿದೆ. ತಮಿಳುನಾಡಿನ ಅರಿಯಾಲೂರು ಜಿಲ್ಲೆಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ.
ಮದುವೆ ವಿಷಯ ತಿಳಿದ ಬಾಲಕನ ಪೋಷಕರು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದರು. ದೂರಿನ ಆಧಾರದ ಮೇಲೆ ಅರಿಯಾಲೂರು ಪೊಲೀಸರು ಶಿಕ್ಷಕಿಯನ್ನು ಬಂಧಿಸಿದ್ದಾರೆ.
ಮಜವರಾಯನಲ್ಲೂರು ಗ್ರಾಮದ 17 ವರ್ಷದ ಬಾಲಕ ಹತ್ತನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಶಾಲೆಯಲ್ಲಿ ಪಾಠ ಮಾಡುತ್ತಿದ್ದ ಶಿಕ್ಷಕಿ ಮೇಲೆ ಪ್ರೇಮಾಂಕುರವಾಗಿ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಬಳಿಕ ಮದುವೆ ಆಗಬೇಕೆಂದು ನಿರ್ಧರಿಸಿದ್ದರು.
ಬಾಲಕ ಅಪ್ರಾಪ್ತ ವಯಸ್ಕನಾಗಿರುವುದರಿಂದ ಪೋಷಕರು, ಸಂಬಂಧಿಗಳು ಮದುವೆಗೆ ನಿರಾಕರಿಸಿದ್ದರು. ಇದಕ್ಕೆಲ್ಲ ಬಗ್ಗದ ಜೋಡಿ ದೇವಸ್ಥಾನದಲ್ಲಿ ಮದುವೆ ಮಾಡಿಕೊಂಡಿದೆ. ಮದುವೆ ವಿಷಯ ತಿಳಿಯುತ್ತಿದ್ದಂತೆ ಬಾಲಕನ ಪೋಷಕರು, ಸಂಬಂಧಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.
ಇದರಿಂದ ಮನನೊಂದು ಬಾಲಕ ಹಾಗೂ ಶಿಕ್ಷಕಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅದೃಷ್ಟವಶಾತ್ ನೆರೆಹೊರೆಯವರು ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದು, ಇಬ್ಬರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಔರಂಗಾಬಾದ್ನಲ್ಲಿ ಭೀಕರ ರಸ್ತೆ ಅಪಘಾತ.. ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ!