ಮುಂಬೈ (ಮಹಾರಾಷ್ಟ್ರ): ವಡಾ ಪಾವ್ನ ಕವರ್ ಎಂದೇ ಭಾವಿಸಿ ಮಹಿಳೆಯೊಬ್ಬರು ಅಚಾನಕ್ ಆಗಿ ಭಿಕ್ಷುಕಿಗೆ ತನ್ನ ಚಿನ್ನಾಭರಣ ಕೊಟ್ಟಿದ್ದಾರೆ. ಆದರೆ, ಆ ಭಿಕ್ಷುಕಿ ಅದನ್ನು ಒಣ ಬ್ರೆಡ್ ಎಂದು ತಿಳಿದು ಕಸದ ರಾಶಿಗೆಸೆದು ಹೋಗುವುದೇ?
ದೇಶದ ವಾಣಿಜ್ಯ ನಗರಿ ಮುಂಬೈನಲ್ಲಿ ಇಂಥದ್ದೊಂದು ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸರು ಚಿನ್ನಾಭರಣವಿದ್ದ ಬ್ಯಾಗ್ ಪತ್ತೆ ಹಚ್ಚಿ, ಅದನ್ನು ಮಾಲೀಕರಿಗೆ ಒಪ್ಪಿಸಿದ್ದಾರೆ.
ಇಷ್ಟಕ್ಕೂ ಆಗಿದ್ದೇನು?: ಇಲ್ಲಿನ ಅರೇಯಾ ಪ್ರದೇಶದ ನಿವಾಸಿಯೊಬ್ಬರು ಇತ್ತೀಚೆಗೆ ತಮ್ಮ ಮಗಳ ಮದುವೆಗೆ ಮಾಡಿದ್ದ ಸಾಲ ತೀರಿಸಲೆಂದು 100 ಗ್ರಾಂ ಚಿನ್ನಾಭರಣವನ್ನು ಬ್ಯಾಂಕ್ನಲ್ಲಿ ಅಡಮಾನವಿಡಲು ಹೋಗುತ್ತಿದ್ದರು. ಈ ಸಂದರ್ಭದಲ್ಲಿ ರಸ್ತೆ ಮಧ್ಯೆ ಒಬ್ಬ ಭಿಕ್ಷುಕಿ ಮತ್ತು ಆಕೆಯ ಮಗು ಕಣ್ಣಿಗೆ ಬಿದ್ದಿದ್ದಾರೆ. ಅನುಕಂಪದಿಂದ ಮಹಿಳೆ ತನ್ನ ಬ್ಯಾಗ್ನಲ್ಲಿದ್ದ ವಡಾ ಪಾವ್ ಇದ್ದ ಕವರ್ ಕೊಟ್ಟಿದ್ದಾಳೆ.
ನಂತರ ಆ ಮಹಿಳೆ ಬ್ಯಾಂಕ್ಗೆ ತಲುಪಿ ತನ್ನ ಬ್ಯಾಗ್ ಪರಿಶೀಲಿಸಿದಾಗ ಚಿನ್ನಾಭರಣ ಕಾಣಿಸಿಲ್ಲ. ಎಚ್ಚೆತ್ತುಕೊಂಡ ಆಕೆಗೆ, ತಾನು ಭಿಕ್ಷುಕಿಗೆ ಕೊಟ್ಟಿರುವ ವಡಾಪಾವ್ ತುಂಬಿದ್ದ ಕವರ್‌ನಲ್ಲಿ ಚಿನ್ನಾಭರಣಗಳೂ ಇದ್ದವು ಎಂಬುವುದು ಗೊತ್ತಾಗಿದೆ. ತಕ್ಷಣವೇ ಭಿಕ್ಷುಕಿ ಇದ್ದ ಜಾಗಕ್ಕೆ ಮರಳಿ ಬಂದಿದ್ದಾಳೆ. ಆದರೆ, ಅಲ್ಲಿ ಭಿಕ್ಷುಕಿ ಕಾಣಿಸಿಲ್ಲ. ಹೀಗಾಗಿ ಅಲ್ಲಿಂದ ಪೊಲೀಸ್ ಠಾಣೆಗೆ ತೆರಳಿ ದೂರು ಕೊಟ್ಟಿದ್ದಾಳೆ.
ಕಸದ ರಾಶಿಗೆಸೆದು ಹೋದ ಭಿಕ್ಷುಕಿ!: ವಿಚಿತ್ರವೆಂದರೆ, ಆ ಮಹಿಳೆ ಕೊಟ್ಟಿದ್ದ ಕವರ್‌ನಲ್ಲಿ ಚಿನ್ನಾಭರಣ ಇರುವುದು ಭಿಕ್ಷುಕಿಗೂ ಗೊತ್ತಾಗಿಲ್ಲ. ಆಕೆ ಅದನ್ನು ಒಣ ಬ್ರೆಡ್ ಎಂದೇ ತಿಳಿದು ಕಸದ ರಾಶಿಗೆಸೆದು ಹೋಗಿದ್ದಳು. ಚಿನ್ನಾಭರಣ ಕಾಣೆಯಾದ ಬಗ್ಗೆ ದೂರು ಸ್ವೀಕರಿಸಿದ್ದ ಪೊಲೀಸರು ಅದರ ಪತ್ತೆಗಾಗಿ ತನಿಖೆ ನಡೆಸುತ್ತಿದ್ದಾಗ ಈ ವಿಷಯ ಗೊತ್ತಾಗಿದೆ.
ಬ್ಯಾಗ್ ಎಳೆದೊಯ್ದು ಇಲಿ!: ಭಿಕ್ಷುಕಿ ಚಿನ್ನಾಭರಣವನ್ನು ಕಸದ ರಾಶಿಗೆಸೆದ ವಿಷಯ ಖಚಿತಪಡಿಸಿಕೊಂಡು ಪೊಲೀಸರು ಸಿಸಿಟಿವಿಗಳ ಪರಿಶೀಲನೆ ನಡೆಸುತ್ತಿದ್ದರು. ಆಗ ಕಸದ ರಾಶಿಯಲ್ಲಿ ಆ ಚಿನ್ನಾಭರಣದ ಬ್ಯಾಗ್ ಕಾಣಿಸಿದೆ. ಸ್ಥಳಕ್ಕೆ ಹೋದಾಗ ಚಿನ್ನಾಭರಣದ ಬ್ಯಾಗ್ ಸುತ್ತ ಇಲಿಯೊಂದು ಸುಳಿದಾಡುತ್ತಿತ್ತು. ಇಲಿಯನ್ನು ಪೊಲೀಸರು ಓಡಿಸಲು ಮುಂದಾಗ ಅದು ಹತ್ತಿರದ ಒಳಚರಂಡಿಯ ರಂಧ್ರದೊಳಗೆ ಚಿನ್ನಾಭರಣದ ಬ್ಯಾಗ್ ಸಮೇತ ಪ್ರವೇಶಿಸಿದೆ. ನಂತರ ಪೊಲೀಸರು ಆ ರಂಧ್ರದಿಂದ ಇಲಿ ಓಡಿಸಿ ಬ್ಯಾಗ್ ಹೊರತೆಗೆದಿದ್ದಾರೆ!.
ಇದನ್ನೂ ಓದಿ: ಆರೋಗ್ಯದಲ್ಲಿ ಏರುಪೇರು: ದೆಹಲಿಗೆ ಸುಪ್ರೀಂಕೋರ್ಟ್ ನ್ಯಾ.ಎಂ.ಆರ್.ಶಾ ಏರ್ಲಿಫ್ಟ್