ಪ್ರಯಾಗರಾಜ್ (ಯುಪಿ): ಗ್ಯಾಂಗ್‌ಸ್ಟರ್ ಅತೀಕ್ ಅಹ್ಮದ್ ಮತ್ತು ಆತನ ಸಹೋದರ ಅಶ್ರಫ್ ಅಹ್ಮದ್ ಹತ್ಯೆಗೆ ಸಂಬಂಧಿಸಿದಂತೆ ನಿರ್ಲಕ್ಷ್ಯ ಆರೋಪದಡಿ ಐವರು ಪೊಲೀಸ್ ಸಿಬ್ಬಂದಿಯನ್ನು ಬುಧವಾರ ಅಮಾನತುಗೊಳಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಮಾನತುಗೊಂಡವರಲ್ಲಿ ಶಹಗಂಜ್ ಪೊಲೀಸ್ ಠಾಣೆಯ ಉಸ್ತುವಾರಿ ಅಶ್ವನಿ ಕುಮಾರ್ ಸಿಂಗ್ ಸೇರಿದ್ದಾರೆ. ಉಳಿದವರು ಸಬ್ಇನ್ಸ್ಪೆಕ್ಟರ್ ಮತ್ತು ಮೂವರು ಕಾನ್ಸ್ಟೇಬಲ್ಗಳು ಎಂದು ತಿಳಿದುಬಂದಿದೆ.
ವೈದ್ಯಕೀಯ ತಪಾಸಣೆಗೆಂದು ಅಹ್ಮದ್ ಮತ್ತು ಅಶ್ರಫ್ ಎಂಬಿಬ್ಬರನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಟಿವಿ ಚಾನೆಲ್ ಸುದ್ದಿಗಾರರ ಸೋಗಿನಲ್ಲಿ ಬಂದಿದ್ದ ಮೂವರು ಯುವಕರು ನಿಜವಾದ ಸುದ್ದಿಗಾರರನ್ನು ಹಿಂದಿಕ್ಕಿ ಮುಂದೆ ಬಂದಿದ್ದರು. ಅವರಲ್ಲಿ ಒಬ್ಬಾತ ಅತೀಕ್‌ನ ತಲೆಯ ಎಡಭಾಗಕ್ಕೆ ಮೊದಲು ಗುಂಡು ಹಾರಿಸಿದ್ದಾನೆ. ಮತ್ತೊಬ್ಬ ಅಶ್ರಫ್ ಮೇಲೆ ಗುಂಡು ಹಾರಿಸಿದ್ದನು.
ವಿಶೇಷ ತನಿಖಾ ತಂಡವು (ಎಸ್‌ಐಟಿ) ಪ್ರಾಥಮಿಕ ತನಿಖೆ ನಡೆಸಿ, ಕರ್ತವ್ಯ ನಿರ್ವಹಿಸುವಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆಂದು ವರದಿ ನೀಡಿದ್ದು ಐವರು ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಪೊಲೀಸ್ ಕಮಿಷನರ್ ರಮಿತ್ ಶರ್ಮಾ ಅವರು ಹತ್ಯೆಗಳ ತನಿಖೆಗಾಗಿ ಹೆಚ್ಚುವರಿ ಪೊಲೀಸ್ ಕಮಿಷನರ್ (ಅಪರಾಧ) ಸತೀಶ್ ಚಂದ್ರ ನೇತೃತ್ವದಲ್ಲಿ ಮೂವರು ಸದಸ್ಯರ ಎಸ್‌ಐಟಿಯನ್ನು ರಚಿಸಿದ್ದರು.
ಈ ಮಧ್ಯೆ ಅತೀಕ್ ಮತ್ತು ಆತನ ಸಹೋದರನನ್ನು ಕೊಂದ ಮೂವರು ಆರೋಪಿಗಳನ್ನು ಮುಖ್ಯ ನ್ಯಾಯಿಕ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಬುಧವಾರ ನಾಲ್ಕು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಪೊಲೀಸರು ಏಳು ದಿನಗಳ ಕಸ್ಟಡಿಗೆ ಕೋರಿದ್ದರಿಂದ ಲವ್ಲೇಶ್ ತಿವಾರಿ, ಮೋಹಿತ್ ಮತ್ತು ಅರುಣ್ ಕುಮಾರ್ ಮೌರ್ಯ ಅವರನ್ನು ಬಿಗಿ ಭದ್ರತೆಯ ನಡುವೆ ಬುಧವಾರ ಬೆಳಿಗ್ಗೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನಂತರ ಆದೇಶವನ್ನು ಅಂಗೀಕರಿಸಿದ ನ್ಯಾಯಾಲಯವು ಅವರನ್ನು ನಾಲ್ಕು ದಿನಗಳ ಕಾಲ ಅಂದರೆ ಬುಧವಾರ ಮಧ್ಯಾಹ್ನ 2 ರಿಂದ ಏಪ್ರಿಲ್ 23 ರ ಸಂಜೆ 5 ರವರೆಗೆ ಪೊಲೀಸ್ ಕಸ್ಟಡಿಗೆ ಕಳುಹಿಸಿದೆ ಎಂದು ಜಿಲ್ಲಾ ಸರ್ಕಾರಿ ವಕೀಲ ಗುಲಾಬ್ ಚಂದ್ರ ಅಗ್ರಹರಿ ಹೇಳಿದ್ದಾರೆ.
14 ದಿನಗಳ ನ್ಯಾಯಾಂಗ ಬಂಧನ: ಮೂವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆ), 307 (ಕೊಲೆಗೆ ಯತ್ನ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಮತ್ತು ಶಹಗಂಜ್ ಪೊಲೀಸ್ ಠಾಣೆಯಲ್ಲಿ ಅತೀಕ್ ಮತ್ತು ಅಶ್ರಫ್ ಅವರ ಮೂವರು ಆಪಾದಿತ ದಾಳಿಕೋರರ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಭಾನುವಾರ, ಈ ಮೂವರು ಆರೋಪಿಗಳನ್ನು ರಿಮಾಂಡ್ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿದ್ದು, ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಅವರನ್ನು ಆರಂಭದಲ್ಲಿ ನೈನಿ ಜೈಲಿನಲ್ಲಿ ಇರಿಸಲಾಗಿತ್ತು. ಆದರೆ ಭದ್ರತಾ ಕಾರಣಗಳನ್ನು ಉಲ್ಲೇಖಿಸಿ ಪ್ರತಾಪಗಢ ಜೈಲಿಗೆ ಸ್ಥಳಾಂತರಿಸಲಾಯಿತು.
ಇದನ್ನೂ ಓದಿ: ಗ್ಯಾಂಗ್‌ಸ್ಟರ್ ಅತೀಕ್ ಅಹ್ಮದ್ ಹತ್ಯೆಯ ಭಯಾನಕ ವಿಡಿಯೋ: ಘಟನೆಯ ಇಂಚಿಂಚು ಮಾಹಿತಿ ಇಲ್ಲಿದೆ