ನವದೆಹಲಿ: ಹಿಜಾಬ್ ಬೆಂಬಲಿಸಿ ಕರ್ನಾಟಕ ಭವನದ ಹೊರಗೆ ಪ್ರತಿಭಟನೆಗೆ ಮುಂದಾದ ವಿದ್ಯಾರ್ಥಿಗಳನ್ನು ನಗರದ ಪೊಲೀಸರು ವಶಕ್ಕೆ ಪಡೆದರು.
ಕರ್ನಾಟಕ ಭವನದ ಹೊರಗೆ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳ ಒಕ್ಕೂಟವು ಹಿಜಾಬ್ ಬೆಂಬಲಿಸಿ ಪ್ರತಿಭಟನೆ ಮಾಡುವುದಾಗಿ ಘೋಷಿಸಿತು. ಇದೇ ವೇಳೆ ಕರ್ನಾಟಕ ಭವನ ಬಂದ್ ಆದ ಕಾರಣ ಪ್ರತಿಭಟನಾ ಸ್ಥಳವನ್ನು ಸ್ಥಳಾಂತರಿಸಿ ಅಸ್ಸೋಂ ಭವನದ ಹೊರಗೆ ಪ್ರತಿಭಟನೆ ನಡೆಸಲು ಯತ್ನಿಸಲಾಗಿದೆ. ಆದರೆ ಪೊಲೀಸರು ಮತ್ತು ಅರೆಸೇನಾ ಪಡೆಗಳು ಪ್ರತಿಭಟನಾಕಾರರನ್ನು ಬಸ್‌ಗಳಲ್ಲಿ ತುಂಬಿ ಬಿರ್ಲಾ ಮಂದಿರ ಮಾರ್ಗದಲ್ಲಿರುವ ಪೊಲೀಸ್ ಠಾಣೆಗೆ ಕರೆದೊಯ್ದರು.
ಇದನ್ನೂ ಓದಿ: ಅಪಾರ್ಟ್ಮೆಂಟ್ನ ಛಾವಣಿ ಕುಸಿದು ಇಬ್ಬರು ಸಾವು, ಹಲವರು ಅವಶೇಷಗಳಡಿ ಸಿಲುಕಿರುವ ಶಂಕೆ
'ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ನಾವು ಇಲ್ಲಿಗೆ ಬಂದಿದ್ದೇವೆ. ಈ ಬಗ್ಗೆ ನಾವು ಹೇಳಿದರೂ ಪೊಲೀಸರು ಪ್ರತಿಭಟನೆ ನಡೆಸಲು ಅವಕಾಶ ನೀಡಲಿಲ್ಲ' ಎಂದು ವಿದ್ಯಾರ್ಥಿಯೊಬ್ಬರು ಈಟಿವಿ ಭಾರತಕ್ಕೆ ತಿಳಿಸಿದರು.
'ಕರ್ನಾಟಕದಲ್ಲಿ ಹಿಜಾಬ್ ಧರಿಸಿರುವ ವಿದ್ಯಾರ್ಥಿಗಳನ್ನು ಬೆಂಬಲಿಸಿ ಪ್ರತಿಭಟನೆ ನಡೆಸಲು ನಾವು ಇಲ್ಲಿಗೆ ಬಂದಿದ್ದೇವೆ. ಭಾರತೀಯ ಸಂವಿಧಾನವು ಅವರ ಧರ್ಮದ ಪ್ರಕಾರ ಅವರು ಬಯಸಿದ ಬಟ್ಟೆಗಳನ್ನು ಧರಿಸಲು ಅವಕಾಶ ನೀಡಿದೆ. ಆದರೆ, ಇದೀಗ ಅದನ್ನು ತಡೆಯುವುದು ಸಂವಿಧಾನ ವಿರೋಧಿ ನಡೆ' ಎಂದು ಮತ್ತೊಬ್ಬ ವಿದ್ಯಾರ್ಥಿ ಅಸಮಾಧಾನ ವ್ಯಕ್ತಪಡಿಸಿದರು.