ಕೋಲ್ಕತ್ತಾ (ಪಶ್ಚಿಮ ಬಂಗಾಳ): ಇಲ್ಲಿನ ಉತ್ತರ 24 ಪರಗಣ ಜಿಲ್ಲೆಗೆ ಸೇರಿದ ದತ್ತಪುಕುರ್ದಲ್ಲಿ ಪಟಾಕಿ ತಯಾರಿಸುವ ಕಾರ್ಖಾನೆಯಲ್ಲಿ ನಿನ್ನೆ (ಭಾನುವಾರ) ಭಾರಿ ಸ್ಫೋಟ ಸಂಭವಿಸಿದ್ದು, ಕೊಳದಲ್ಲಿ ಮತ್ತೊಂದು ಮೃತದೇಹ ಪತ್ತೆಯಾದ ಹಿನ್ನೆಲೆ ಸಾವಿನ ಸಂಖ್ಯೆ 9ಕ್ಕೆ ಏರಿಕೆ ಆಗಿದೆ. ಇನ್ನೂ ಹಲವು ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಫೋಟಕ್ಕೆ ಸಂಬಂಧಿಸಿದಂತೆ ಪೊಲೀಸರು ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿ ಅಕ್ರಮ ಪಟಾಕಿ ಕಾರ್ಖಾನೆ ಮಾಲೀಕರ ಪಾಲುದಾರ ಎಂದು ಪೊಲೀಸರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ತಲೆಯಿಲ್ಲದ ದೇಹ ಕೊಳದಲ್ಲಿ ಸಿಕ್ಕಿದ್ದು, ತಲೆಯು ಪಕ್ಕದ ಮನೆಯ ಅಂಗಳದಿಂದ ಪತ್ತೆಯಾಗಿದೆ, ಸ್ಫೋಟದ ಸ್ಥಳದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಒಂದು ಕೈ ಮತ್ತು ಎರಡು ಬೆರಳುಗಳು ಸಹ ಕಂಡು ಬಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
"ಶೋಧ ಕಾರ್ಯಾಚರಣೆಯನ್ನು ಇಡೀ ರಾತ್ರಿ ನಡೆಸಲಾಗಿದೆ. ವಿದ್ಯುತ್ ಕೊರತೆ ಮತ್ತು ಇಲ್ಲಿ ಚದುರಿದ ಅವಶೇಷಗಳ ಅಡಿ ಹುಡುಕಾಟ ನಡೆಸುವುದು ಕಷ್ಟವಾಯಿತು. ಅಕ್ರಮವಾಗಿ ಪಟಾಕಿ ಕಾರ್ಖಾನೆ ನಡೆಸುತ್ತಿದ್ದ ಒಬ್ಬ ಪಾಲುದಾರನನ್ನು ಈ ಪ್ರಕರಣದಡಿ ಬಂಧಿಸಲಾಗಿದೆ. ಸ್ಫೋಟಕ ಕಾಯ್ದೆ 1884 ಮತ್ತು ಸ್ಫೋಟಕ ನಿಯಮಗಳು 2008ರ ಅಡಿ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ" ಎಂದು ಬರಾಸತ್ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಸ್ಫೋಟಕ್ಕೆ ಸಂಬಂಧಿಸಿದಂತೆ ಇತರ ಮೂವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ. ಭಾನುವಾರ ಬೆಳಗ್ಗೆ 8.30ರ ಸುಮಾರಿಗೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಅಕ್ರಮವಾಗಿ ನಡೆಸುತ್ತಿದ್ದ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿದೆ. ಸ್ಫೋಟದ ಪ್ರಭಾವವು ಎಷ್ಟು ತೀವ್ರತೆ ಹೊಂದಿತ್ತು ಎಂದರೆ, ನೆರೆಹೊರೆಯ 50ಕ್ಕೂ ಹೆಚ್ಚು ಮನೆಗಳು ಭಾಗಶಃ ಹಾನಿಗೊಳಗಾಗಿವೆ. ಪೊಲೀಸ್ ಮತ್ತು ಸ್ಥಳೀಯ ಆಡಳಿತವು ಕಟ್ಟಡದ ಉಳಿದ ಭಾಗವನ್ನು ಜೆಸಿಬಿ ಯಂತ್ರಗಳನ್ನು ಬಳಸಿ ತೆರವುಗೊಳಿಸುತ್ತಿದೆ.
ಅಕ್ರಮ ಕಾರ್ಖಾನೆ:" ಅಕ್ರಮವಾಗಿ ನಡೆಯುತ್ತಿರುವ ಈ ಕಾರ್ಖಾನೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಪಟಾಕಿ ತಯಾರಿಕೆ ನಡೆಯುತ್ತಿದೆ. ಅನಾಹುತ ಸಂಭವಿಸುವ ಬಗ್ಗೆ ಸ್ಥಳೀಯರು ಮೊದಲೇ ಅಧಿಕಾರಿಗಳ ಗಮನಕ್ಕೆ ತಂದು ಪ್ರತಿಭಟನೆ ಕೂಡ ನಡೆಸಿದ್ದರು. ಇಷ್ಟಾದರೂ ಕಾರ್ಖಾನೆ ವಿರುದ್ಧ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಇದೀಗ ಕಾರ್ಖಾನೆಯಲ್ಲಿ ಬೆಂಕಿ ಹೊತ್ತಿಕೊಂಡು ಪಟಾಕಿ ದಾಸ್ತಾನು ಸ್ಫೋಟವಾಗಿದೆ. ಇಲ್ಲಿ ಹಲವಾರು ಮಹಿಳೆಯರು ಕೆಲಸ ಮಾಡುತ್ತಿದ್ದು, ನಿರ್ಲಕ್ಷ್ಯವೇ ದುರಂತಕ್ಕೆ ಕಾರಣ" ಎಂದು ಸ್ಥಳೀಯರು ದೂರಿದ್ದಾರೆ.
ಇದನ್ನೂ ಓದಿ: ಪಶ್ಚಿಮ ಬಂಗಾಳದ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; 6 ಮಂದಿ ದಾರುಣ ಸಾವು