ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ರಾಜೌರಿ ಜಿಲ್ಲೆ ಡ್ಯಾಂಗ್ರಿಯಲ್ಲಿ ನಡೆದ ಭಯೋತ್ಪಾದನೆ ದಾಳಿಯಲ್ಲಿ ಆರು ಜನರನ್ನು ಹತ್ಯೆ ಮಾಡಿರುವ ಉಗ್ರಗಾಮಿಗಳ ಮಾಹಿತಿಯನ್ನು ಹಂಚಿಕೊಂಡವರಿಗೆ 10 ಲಕ್ಷ ರೂಪಾಯಿ ಬಹುಮಾನ ನೀಡಲಾಗುವುದು ಎಂದು ರಾಜೌರಿ ಜಿಲ್ಲೆಯ ಪೊಲೀಸರು ಘೋಷಿಸಿದ್ದಾರೆ.
ಪ್ರಣಾಳಿಕೆ ಬಿಡುಗಡೆ ಮಾಡಿದ ರಾಜೌರಿ ಪೊಲೀಸರು, ಭಯೋತ್ಪಾದಕರ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಮೊಬೈಲ್ ಸಂಖ್ಯೆಗಳನ್ನು ಒದಗಿಸಿದ್ದು, ಮಾಹಿತಿ ನೀಡುವವರ ವಿವರಗಳನ್ನು ಸಂಪೂರ್ಣ ಗೌಪ್ಯವಾಗಿಡಲಾಗುವುದು ಎಂದು ತಿಳಿಸಿದ್ದಾರೆ.
ರಾಜೌರಿ ಡ್ಯಾಂಗ್ರಿಯಲ್ಲಿ ಭಾನುವಾರ ಸಂಜೆ ನಡೆದಿದ್ದ ಭಯೋತ್ಪಾದನೆ ದಾಳಿಯಲ್ಲಿ 6 ಜನ ನಾಗರಿಕರನ್ನು ಹತ್ಯೆ ಮಾಡಲಾಗಿದ್ದು, ಮಂಗಳವಾರ ಬೆಳಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆಯ ವಿಶೇಷ ತಂಡವು ಸ್ಥಳಕ್ಕೆ ಭೇಟಿ ನೀಡಿ ಮತ್ತೊಮ್ಮೆ ಪರಿಶೀಲಿಸಿದೆ. ಶಸ್ತ್ರಸಜ್ಜೀತ ಶಂಕಿತ ಉಗ್ರಗಾಮಿಗಳು ಭಾನುವಾರ ಸಂಜೆ ಡ್ಯಾಂಗ್ರಿ ಗ್ರಾಮಕ್ಕೆ ನುಗ್ಗಿ 4 ನಾಗರಿಕರು ಹತ್ಯೆ ಮಾಡಿದ್ದು, ಮತ್ತು 6 ಮಂದಿ ಗಾಯಗೊಂಡಿದ್ದಾರೆ. ಮರುದಿನ ಬೆಳಗ್ಗೆ ಡ್ಯಾಂಗ್ರಿ ಗ್ರಾಮದಲ್ಲಿ ಐಇಡಿ ಸ್ಫೋಟದಿಂದ ಇಬ್ಬರು ಅಪ್ರಾಪ್ತ ಮಕ್ಕಳು ಸಹ ಸಾವಿಗೀಡಾಗಿದ್ದರು ಹಾಗೂ ಕೆಲವರು ಗಾಯಗೊಂಡಿದ್ದರು ಎಂದು ಹೇಳಿದರು.
ಈ ಭಯೋತ್ಪಾದನೆ ದಾಳಿಯು ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ. ಆದರೆ, ಭದ್ರತಾ ಏಜೆನ್ಸಿಗಳು ದಾಳಿಯ ಬಗ್ಗೆ ಸಂಪೂರ್ಣ ವಿವರಗಳನ್ನು ಕಂಡು ಹಿಡಿಯಲು ನಿರಂತರ ಪರಿಶೀಲನೆ ಹಾಗೂ ಪ್ರಯತ್ನಿಸುತ್ತಿವೆ ಎಂದು ತಿಳಿಸಿದ್ದಾರೆ. ಭದ್ರತಾ ಏಜೆನ್ಸಿಗಳು ಘಟನೆಯ ಸ್ಥಳಕ್ಕೆ ಭೇಟಿ ನೀಡಿದ್ದು, ಸಂತ್ರಸ್ತ ಕುಟುಂಬಗಳಿಗೆ ಸಹಾಯ ಹಾಗೂ ನ್ಯಾಯವನ್ನು ಒದಗಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
ಆಧಾರ್ ಕಾರ್ಡ್ ನೋಡಿ ಗುಂಡಿನ ದಾಳಿ: ಡಿಸೆಂಬರ್ 31 ರಂದು ಭಯೋತ್ಪಾದಕರು ಡ್ಯಾಂಗ್ರಿ ಗ್ರಾಮದ ನಾಲ್ವರ ಆಧಾರ್ ಕಾರ್ಡ್‌ಗಳನ್ನು ಗುರುತಿಸಿ ಶಂಕಿತ ಉಗ್ರರು ಮೂರು ಮನೆಗಳ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಈ ಭಯೋತ್ಪಾದನೆ ದಾಳಿಯಲ್ಲಿ ನಾಲ್ವರು ನಾಗರಿಕರು ಮೃತರಾಗಿದ್ದು, ಆರು ಮಂದಿ ಗಾಯಗೊಂಡಿದ್ದರು. ಈ ಭಯೋತ್ಪಾದಕ ದಾಳಿಯ ನಂತರ, ಪೊಲೀಸರು ಮತ್ತು ಭದ್ರತಾ ಏಜೆನ್ಸಿಗಳು ಪ್ರದೇಶವನ್ನು ಸುತ್ತುವರಿದು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದವು. ಇಷ್ಟೆಲ್ಲ ಆದರೂ ಉಗ್ರರು ಕೈಗೆ ಸಿಗಲಿಲ್ಲ.
ಐಇಡಿ ಸ್ಫೋಟದಿಂದ ಇಬ್ಬರು ಮಕ್ಕಳು ಸಾವು: ಡ್ಯಾಂಗ್ರಿ ಗ್ರಾಮದಲ್ಲಿ ಪ್ರೀತಮ್‌ಲಾಲ್ ಅವರ ಮನೆಯ ಸಮೀಪ ಐಇಡಿ ಸ್ಫೋಟದಿಂದ ಇಬ್ಬರು ಮಕ್ಕಳು ಸಮೀಕ್ಷಾ ಶರ್ಮಾ ಮತ್ತು ವಿಹಾನ್ ಕುಮಾರ್ ಶರ್ಮಾ ಜನವರಿ 1ರಂದು ಭಾನುವಾರ ಸಾವನ್ನಪ್ಪಿದ್ದಾರೆ. ಈ ಸ್ಫೋಟ ಸಂಭವಿಸಿದಾಗ, ಆ ಸಮಯದಲ್ಲಿ 9:30 ರ ಸುಮಾರಿಗೆ ಪ್ರೀತಮ್ಲಾಲ್ ತನ್ನ ಸಂಬಂಧಿಕರ ಮನೆಯಲ್ಲಿದ್ದ. ಈ ಸ್ಪೋಟದ ಬಳಿಕ ಗ್ರಾಮದ ಸರಪಂಚ್ ದೀಪಕ್ ಕುಮಾರ್ ಅವರು, ಇದು ಪೊಲೀಸ್ ಮತ್ತು ಭದ್ರತಾ ಏಜೆನ್ಸಿಗಳ ಗಂಭೀರವಾದ ಭದ್ರತಾ ಲೋಪ ಎಂದು ಆರೋಪಿಸಿದ್ದರು.
24 ಗಂಟೆಯಲ್ಲಿ 6 ಕಾಶ್ಮೀರಿ ಪಂಡಿತರು ಹತ್ಯೆ: ಡಿಸೆಂಬರ್ 31 ಮತ್ತು ಜನವರಿ 1 ರ ನಡುವೆ 6 ಕಾಶ್ಮೀರಿ ಪಂಡಿತರನ್ನು ಉಗ್ರಗಾಮಿಗಳು ಕೊಂದಿದ್ದು, ದಾಳಿಯ ನಂತರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಸೋಮವಾರ ಸಂತ್ರಸ್ತರ ಮನೆಗಳಿಗೆ ಭೇಟಿ ನೀಡಿ, ಸಾಂತ್ವನ ಹೇಳಿದ್ದರು. ಈ ವೇಳೆ ಮಾತನಾಡಿದ ಅವರು, ಉಗ್ರಗಾಮಿಗಳನ್ನು ಕೊಲ್ಲಲು ಭದ್ರತಾ ಪಡೆಗಳಿಗೆ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಿದ್ದೇವೆ. ಈ ದಾಳಿಯ ಅಪರಾಧಿಗಳಿಗೆ ಶೀಘ್ರದಲ್ಲೇ ಶಿಕ್ಷೆಯಾಗಲಿದೆ ಎಂದು ಭರವಸೆ ನೀಡಿದ್ದರು. ಭಯೋತ್ಪಾದಕರನ್ನು ಮತ್ತು ಇಡೀ ಭಯೋತ್ಪಾದಕ ವ್ಯವಸ್ಥೆಯನ್ನು ಹತ್ತಿಕ್ಕುವುದು ನಮ್ಮ ಸಂಕಲ್ಪವಾಗಿದೆ ಎಂದಿದ್ದರು.
ಇದನ್ನೂಓದಿ:ಜನಪ್ರತಿನಿಧಿಗಳ ವಾಕ್ ಸ್ವಾತಂತ್ರ್ಯದ ಮೇಲೆ ಹೆಚ್ಚಿನ ನಿರ್ಬಂಧ ವಿಧಿಸಲಾಗುವುದಿಲ್ಲ: ಸುಪ್ರೀಂ