ಫಿರೋಜ್‌ಪುರ : ಪ್ರಧಾನಿ ಮೋದಿ ಪಂಜಾಬ್ ಭೇಟಿ ವೇಳೆ ನಡೆದ ಭದ್ರತಾ ವೈಫಲ್ಯಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಐದು ಸದಸ್ಯರ ಸಮಿತಿ ರಚಿಸಿತ್ತು. ಭಾನುವಾರ ಈ ಸಮಿತಿಯು ಫಿರೋಜ್ಪುರದ ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದೆ.
ನಿವೃತ್ತ ಸುಪ್ರೀಂಕೋರ್ಟ್ನ ನ್ಯಾಯಮೂರ್ತಿ ಇಂದೂ ಮಲ್ಹೋತ್ರಾ ನೇತೃತ್ವದಲ್ಲಿ ಐವರು ಸದಸ್ಯರ ಸಮಿತಿಯನ್ನು ಜನವರಿ 12ರಂದು ರಚಿಸಲಾಗಿತ್ತು.
ಫಿರೋಜ್‌ಪುರದಲ್ಲಿನ ಸಾರ್ವಜನಿಕ ಸಭೆಗೆ ತೆರಳುವಾಗ ಮಾರ್ಗ ಮಧ್ಯೆ ಸುಮಾರು 15 ರಿಂದ 20 ನಿಮಿಷಗಳ ಕಾಲ ಪ್ರಧಾನಿ ಸಿಲುಕಿಕೊಂಡಿದ್ದ ಮೇಲ್ಸೇತುವೆಯನ್ನು ಭಾನುವಾರ ನ್ಯಾಯಮೂರ್ತಿ ಇಂದೂ ಮಲ್ಹೋತ್ರಾ ಪರಿಶೀಲಿಸಿದರು.
ಇದನ್ನೂ ಓದಿ: ಲತಾ ಮಂಗೇಶ್ಕರ್ ಅವರಿಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ
ನ್ಯಾಯಮೂರ್ತಿ ಮಲ್ಹೋತ್ರಾ ಅವರೊಂದಿಗೆ ಚಂಡೀಗಢದ ಡಿಜಿಪಿ, ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ), ಪಂಜಾಬ್‌ನ ಎಡಿಜಿಪಿ ಭದ್ರತೆ ಮತ್ತು ಪಂಜಾಬ್ ಹಾಗೂ ಹರಿಯಾಣ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಇದ್ದರು. ಪ್ರಮುಖವಾಗಿ, ಪ್ರಧಾನಿ ಭೇಟಿಗೆ ಸಂಬಂಧಿಸಿದ ಸಂಪೂರ್ಣ ದಾಖಲೆ ಈಗಾಗಲೇ ಸಮಿತಿಗೆ ತಲುಪಿದೆ.
ಕಳೆದ ತಿಂಗಳು ಪ್ರಧಾನಿಯವರ ಭದ್ರತಾ ಲೋಪದ ನಂತರ, ಕೇಂದ್ರ ಮತ್ತು ಪಂಜಾಬ್ ಸರ್ಕಾರ ಪ್ರತ್ಯೇಕ ತನಿಖೆ ಪ್ರಾರಂಭಿಸಿದ್ದವು. ಪಂಜಾಬ್ ನಿವೃತ್ತ ನ್ಯಾಯಮೂರ್ತಿ ಮೆಹ್ತಾಬ್ ಸಿಂಗ್ ಗಿಲ್ ಮತ್ತು ಗೃಹ ಕಾರ್ಯದರ್ಶಿ ಅನುರಾಗ್ ವರ್ಮಾ ಅವರ ನೇತೃತ್ವದಲ್ಲಿ ಪಂಜಾಬ್ ಸರ್ಕಾರ ಸಮಿತಿಯನ್ನೂ ರಚಿಸಿದೆ.
ಕೇಂದ್ರವು ಗುಪ್ತಚರ ಬ್ಯೂರೋ ಮತ್ತು ಎಸ್‌ಪಿಜಿ ಅಧಿಕಾರಿಗಳ ಜೊತೆಗೆ ಭದ್ರತಾ ಕಾರ್ಯದರ್ಶಿ ನೇತೃತ್ವದಲ್ಲಿ ತನಿಖಾ ಸಮಿತಿ ರಚಿಸಿದೆ. ಈ ಪ್ರಕರಣ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ನಂತರ ಎರಡೂ ಸಮಿತಿಗಳನ್ನು ಸುಪ್ರೀಂಕೋರ್ಟ್ ವಜಾಗೊಳಿಸಿತ್ತು.