ಶಿಮ್ಲಾ(ಹಿಮಾಚಲ ಪ್ರದೇಶ): ದೇವಭೂಮಿ ಹಿಮಾಚಲ ಪ್ರದೇಶದೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರ ನಂಟು ವಿಶೇಷವಾದದ್ದು. ಕೇಂದ್ರದಲ್ಲಿ ಬಿಜೆಪಿ ಸರ್ಕಾರ 8 ವರ್ಷಗಳನ್ನು ಪೂರೈಸಿದ ಹಿನ್ನೆಲೆ ಕಾರ್ಯಕ್ರಮ ನಡೆಸಲು ಪ್ರಧಾನಿ ನರೇಂದ್ರ ಮೋದಿ ಅವರು ಹಿಮಾಚಲವನ್ನು ಆಯ್ಕೆ ಮಾಡಲು ಬಹುಶಃ ಇದೇ ಕಾರಣವಾಗಿರಬಹುದು.
ಹಿಮಾಚಲದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 27 ಏಪ್ರಿಲ್ 2017 ರಂದು ಶಿಮ್ಲಾದಲ್ಲಿ ತಮ್ಮ ಎರಡನೇ ಭೇಟಿಯಲ್ಲಿ ಚುನಾವಣಾ ರ್‍ಯಾಲಿಯನ್ನುದ್ದೇಶಿಸಿ ಮಾತನಾಡುತ್ತ, ರಾಜ್ಯಕ್ಕೆ ಸಂಬಂಧಿಸಿದ ತಮ್ಮ ಅನೇಕ ನೆನಪುಗಳನ್ನು ಹಂಚಿಕೊಂಡಿದ್ದರು. ಭಾರತ ರತ್ನ ಮತ್ತು ದೇಶದ ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರು 1999 ರಲ್ಲಿ ಶಿಮ್ಲಾದಲ್ಲಿ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದಾಗ, ನಾನು ಸಂಘಟನೆಯ ಕಾರ್ಯಕರ್ತನಾಗಿ ರ್‍ಯಾಲಿಗೆ ಬಂದಿದ್ದೆ ಎಂದು ಪ್ರಧಾನಿ ಮೋದಿ ಹೇಳಿದ್ದರು. ಅವರು ಕಾಫಿ ಹೌಸ್ ಶಿಮ್ಲಾ ಬಗ್ಗೆಯೂ ಪ್ರಸ್ತಾಪ ಮಾಡಿದ್ದರು. ಡಿಸೆಂಬರ್ 2017 ರಲ್ಲಿ ಮುಖ್ಯಮಂತ್ರಿ ಜೈ ರಾಮ್ ಠಾಕೂರ್ ಅವರ ಪ್ರಮಾಣವಚನ ಸಮಾರಂಭದಲ್ಲಿ ಮತ್ತೇ ಇಲ್ಲಿಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಬೆಂಗಾವಲು ಪಡೆಯನ್ನು ನಿಲ್ಲಿಸಿ ಕಾಫಿ ಹೌಸ್ ಶಿಮ್ಲಾದಲ್ಲಿ ಕಾಫಿ ಸೇವಿಸಿ ತಮ್ಮ ಹಳೆಯ ನೆನಪುಗಳನ್ನು ಸ್ಮರಿಸಿದ್ದರು.
1957 ರಲ್ಲಿ ಇಂಡಿಯನ್ ಕಾಫಿ ಹೌಸ್ ರಚನೆ: 1957 ರಲ್ಲಿ ಸ್ಥಾಪನೆಯಾದ ಶಿಮ್ಲಾದ ಪ್ರಸಿದ್ಧ ಇಂಡಿಯನ್ ಕಾಫಿ ಹೌಸ್ ಕಾಫಿಯ ವಿಶಿಷ್ಟ ರುಚಿಗೆ ದೇಶಾದ್ಯಂತ ಹೆಸರುವಾಸಿಯಾಗಿದೆ. ಇದನ್ನು ಶಿಮ್ಲಾದಲ್ಲಿ ರಾಜಕೀಯ ಚರ್ಚೆಗಳ ನೆಲೆ ಎಂದೂ ಸಹ ಕರೆಯುತ್ತಾರೆ. 1990ರ ದಶಕದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಹಿಮಾಚಲ ಬಿಜೆಪಿ ಉಸ್ತುವಾರಿಯಾಗಿದ್ದಾಗ ಪ್ರತಿದಿನ ಇಲ್ಲಿ ಕಾಫಿ ಕುಡಿದು ಸಂಘಟನೆಯನ್ನು ಬಲಪಡಿಸುವ ಕೆಲಸ ಮಾಡುತ್ತಿದ್ದರು.
ಇಂಡಿಯನ್ ಕಾಫಿ ಹೌಸ್ ಮ್ಯಾನೇಜರ್ ಹೇಳುವುದೇನು: ನರೇಂದ್ರ ಮೋದಿ ಕೂಡ ಸಾಮಾನ್ಯ ಗ್ರಾಹಕರಂತೆ ದಿನನಿತ್ಯ ಇಲ್ಲಿಗೆ ಬರುತ್ತಿದ್ದರಂತೆ. ಆದರೆ ಅಂದು ನರೇಂದ್ರ ಮೋದಿ ಅವರು ಪ್ರಧಾನಿಯಾಗುತ್ತಾರೆ ಎಂದು ಬಹುಶಃ ಯಾರೂ ಭಾವಿಸಿರಲಿಲ್ಲ ಎಂದು ಇಂಡಿಯನ್ ಕಾಫಿ ಹೌಸ್ ವ್ಯವಸ್ಥಾಪಕ ಆತ್ಮರಾಮ್ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಹೃದಯದಲ್ಲಿ ಇಂದಿಗೂ ಈ ಸ್ಥಳದ ನೆನಪುಗಳಿರುವುದು ಇಂಡಿಯನ್ ಕಾಫಿ ಹೌಸ್ ಗೆ ಹೆಮ್ಮೆ ಮತ್ತು ಸಂತೋಷದ ಸಂಗತಿ. ಇಲ್ಲಿನ ಫೇಮಸ್ ಕಾಫಿಯ ರುಚಿಯನ್ನು ಬಿಜೆಪಿ ದಿಗ್ಗಜ ಎಲ್.ಕೆ. ಅಡ್ವಾಣಿ ಕೂಡ ಸವಿದಿದ್ದಾರೆ ಎಂದು ಸ್ಮರಿಸಿದರು.
ದೇಶದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಅವರು ದೆಹಲಿಯ ಇಂಡಿಯನ್ ಕಾಫಿ ಹೌಸ್ ನಲ್ಲಿ ಕಾಫಿ ಕುಡಿದಿದ್ದಾರೆ. ಇದಲ್ಲದೇ ಶಿಮ್ಲಾ ಬಾಲಿವುಡ್ ಸಿನಿಮಾ ಶೂಟಿಂಗ್‌ಗೂ ಹೆಸರುವಾಸಿಯಾಗಿದೆ. ಕಲಾವಿದರು ಶಿಮ್ಲಾವನ್ನು ತಲುಪಿದಾಗಲೆಲ್ಲ, ಭಾರತೀಯ ಕಾಫಿ ಹೌಸ್‌ನ ಪ್ರಸಿದ್ಧ ಕಾಫಿಯನ್ನು ಸವಿಯುವುದನ್ನು ಮಾತ್ರ ಮರೆಯುವುದಿಲ್ಲ.
ಶಿಮ್ಲಾದ ಇಂಡಿಯನ್ ಕಾಫಿ ಹೌಸ್‌ನ ಮ್ಯಾನೇಜರ್ಗಳಾದ ಉತ್ತರಾಖಂಡದ ಶ್ಯಾಮ್ ನೇಗಿ ಮತ್ತು ಎ.ಕೆ. ನಯ್ಯರ್ 1957 ರಲ್ಲಿ ಕಾಫಿ ಹೌಸ್ ಅನ್ನು ಸ್ಥಾಪಿಸಿದ್ದರು. ಐತಿಹಾಸಿಕ ಮಹತ್ವವನ್ನು ಕಾಪಾಡಿಕೊಳ್ಳಲು ಇಂಡಿಯನ್ ಕಾಫಿ ಹೌಸ್‌ನಲ್ಲಿ ಕೆಲಸ ಮಾಡುವ ಪರಿಚಾರಕರು ಸಾಂಪ್ರದಾಯಿಕ ಸಮವಸ್ತ್ರದಲ್ಲಿಯೇ ಇರುತ್ತಾರೆ. 1957 ರಿಂದ ಇಲ್ಲಿಯವರೆಗೆ ಕಾಫಿ ಹೌಸ್ ಬದಲಾಗಿಲ್ಲ.
ಕಾಲಕಾಲಕ್ಕೆ ಹಿಮಾಚಲವನ್ನು ಬ್ರ್ಯಾಂಡ್ ಮಾಡುತ್ತಲೇ ಇದ್ದಾರೆ ಮೋದಿ: ಪ್ರವಾಸೋದ್ಯಮವನ್ನು ಉತ್ತೇಜಿಸಲು ಹಿಮಾಚಲ ಸರ್ಕಾರಗಳು ಕಾಲಕಾಲಕ್ಕೆ ಚಲನಚಿತ್ರ ಕಲಾವಿದರು ಮತ್ತು ಕ್ರೀಡಾ ವ್ಯಕ್ತಿಗಳಿಂದ ಸಹಕಾರವನ್ನು ತೆಗೆದುಕೊಳ್ಳುತ್ತವೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಹಣವಿಲ್ಲದೆ ದೇಶದಲ್ಲಿ ದೇವಭೂಮಿಯನ್ನು ಬ್ರ್ಯಾಂಡಿಂಗ್ ಮಾಡುತ್ತಿದ್ದಾರೆ. ಜನವರಿ 27 ರಂದು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ ಹಿಮದಿಂದ ಆವೃತವಾದ ಶಿಮ್ಲಾ ರೈಲು ನಿಲ್ದಾಣದ ಸೌಂದರ್ಯವನ್ನು ಪೋಸ್ಟ್ ಮಾಡಿದ್ದರು.
ಇದಕ್ಕೂ ಮೊದಲು, ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಅಮೆರಿಕದಲ್ಲಿ, ಪಿಎಂ ಮೋದಿ ಮೆಲಾನಿಯಾ ಟ್ರಂಪ್‌ಗೆ ಹಿಮಾಚಲಕ್ಕೆ ಸಂಬಂಧಿಸಿದ ಉಡುಗೊರೆಗಳನ್ನು ನೀಡಿದ್ದರು.
ಇದಾದ ನಂತರ ಪ್ರಧಾನಿ ಇಸ್ರೇಲ್ ಪ್ರವಾಸದಲ್ಲಿ ಹಿಮಾಚಲದ ಕ್ಯಾಪ್ ಧರಿಸಿದ್ದರು. ಮ್ಯಾನ್ಮಾರ್‌ನಲ್ಲೂ ಪ್ರಧಾನಿ ಹಿಮಾಚಲ ಪ್ರದೇಶವನ್ನು ಪ್ರಸ್ತಾಪಿಸಿದ್ದರು. ಇದೀಗ ಶಿಮ್ಲಾ ರೈಲು ನಿಲ್ದಾಣ ಹೊಸ ರೂಪದಲ್ಲಿ ದೇಶ ಹಾಗೂ ವಿಶ್ವದಲ್ಲಿ ಕುತೂಹಲ ಮೂಡಿಸಿದೆ. ಇದಲ್ಲದೇ ಪ್ರಧಾನಿಯವರು ಹಿಮಾಚಲ ಪ್ರದೇಶಕ್ಕೆ ಭೇಟಿ ನೀಡಿದಾಗಲೆಲ್ಲಾ ಅಲ್ಲಿನ ಅಡುಗೆ, ಪ್ರಕೃತಿಯ ಸೊಬಗು ಮತ್ತು ಹಿಮಾಚಲದ ವಿಶೇಷ ಅಂಶಗಳೊಂದಿಗೆ ತಮ್ಮ ಹಂಬಲವನ್ನು ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚೆಗಷ್ಟೇ ಪ್ರಧಾನಿ ಶಿಮ್ಲಾ ರೈಲು ನಿಲ್ದಾಣದ ಫೋಟೋ ಹಾಕಿದಾಗ ಲಕ್ಷ ಲಕ್ಷ ಜನ ಲೈಕ್ ಮಾಡಿದ್ದಾರೆ.
ಸ್ಥಳೀಯ ನಾಗರಿಕರು ಹೇಳುವುದೇನು: ಸ್ಥಳೀಯ ನಾಗರಿಕರಾದ ಶ್ಯಾಮ್ ಲಾಲ್ ಶರ್ಮಾ ಅವರು ಕಳೆದ 40 ವರ್ಷಗಳಿಂದ ಇಂಡಿಯನ್ ಕಾಫಿ ಹೌಸ್ ಗೆ ಬರುತ್ತಿದ್ದಾರಂತೆ. ಪ್ರತಿ ವರ್ಗದ ಜನರು ಇಲ್ಲಿಗೆ ಬಂದು ಕಾಫಿ ಕುಡಿಯುತ್ತಾರೆ, ಸ್ನೇಹಿತರೊಂದಿಗೆ ಕುಳಿತು ಚರ್ಚಿಸುತ್ತಾರೆ ಎಂದು ಶ್ಯಾಮ್ ಲಾಲ್ ಹೇಳುತ್ತಾರೆ.
ಕಳೆದ 50 ವರ್ಷಗಳಿಂದ ಕಾಫಿ ಹೌಸ್‌ಗೆ ಬರುತ್ತಿದ್ದು, ಇಲ್ಲಿಗೆ ಬಂದು ಕಾಫಿ ಕುಡಿಯುತ್ತೇನೆ ಎಂದು ಮತ್ತೊಬ್ಬ ಸ್ಥಳೀಯ ನಾಗರಿಕ ರೂಪ್ ಸಿಂಗ್ ವರ್ಮಾ ಹೇಳಿದ್ದಾರೆ. ಈ ಕಾಫಿ ಹೌಸ್‌ಗೆ ದೇಶ ಮಾತ್ರವಲ್ಲದೆ ವಿದೇಶಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾಫಿ ಸವಿಯುತ್ತಾರೆ ಎಂದು ತಿಳಿಸಿದ್ದಾರೆ.
ಅನೇಕ ಸೆಲೆಬ್ರಿಟಿಗಳು ಸಹ ಇದರ ಅಭಿಮಾನಿಗಳು: ಪ್ರಧಾನಿ ನರೇಂದ್ರ ಮೋದಿ ಅವರಲ್ಲದೆ, ಮಹಾತ್ಮ ಗಾಂಧಿ, ಪಂಡಿತ್ ಜವಾಹರಲಾಲ್ ನೆಹರು ಮತ್ತು ಎಲ್ ಕೆ ಅಡ್ವಾಣಿ ಸೇರಿದಂತೆ ಅನೇಕ ಚಲನಚಿತ್ರ ತಾರೆಯರು ಸಹ ಈ ಇಂಡಿಯನ್ ಕಾಫಿ ಹೌಸ್‌ನಲ್ಲಿ ಕಾಫಿಯನ್ನು ಆನಂದಿಸಿದ್ದಾರೆ. ಇದು ಪ್ರವಾಸಿಗರ ನೆಚ್ಚಿನ ಸ್ಥಳವೂ ಆಗಿದೆ.
ಇದನ್ನೂ ಓದಿ:ಡ್ರೋನ್ ಮೂಲಕ ಅಂಚೆ ಸೇವೆ.. ಗುಜರಾತ್ನಲ್ಲಿ ಯಶಸ್ವಿಯಾದ ಪ್ರಯೋಗ