ವಾರಣಾಸಿ ( ಉತ್ತರ ಪ್ರದೇಶ) : ಪಂಜಾಬ್ ಮಾಜಿ ಮುಖ್ಯಮಂತ್ರಿ, ಶಿರೋಮಣಿ ಅಕಾಲಿದಳ ಸಂಸ್ಥಾಪಕ ಪ್ರಕಾಶ್ ಸಿಂಗ್ ಬಾದಲ್ ಮಂಗಳವಾರ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಅವರು ನಿನ್ನೆ ಮೊಹಾಲಿಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಇವರಿಗೆ 95 ವರ್ಷ ವಯಸ್ಸಾಗಿತ್ತು. ಪ್ರಕಾಶ್ ಸಿಂಗ್ ಬಾದಲ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ, ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಪಂಜಾಬ್ ಸಿಎಂ ಭಗವಂತ್ ಮಾನ್ ಸೇರಿ ಹಲವು ಗಣ್ಯಾತಿಗಣ್ಯರು ಸಂತಾಪ ಸೂಚಿಸಿದ್ದರು.
ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಮತ್ತು ಪ್ರಕಾಶ್ ಸಿಂಗ್ ಬಾದಲ್ ಅವರ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದರಲ್ಲಿ ಪ್ರಧಾನಿ ಮೋದಿಯವರು ಪ್ರಕಾಶ್ ಸಿಂಗ್ ಬಾದಲ್ ಅವರ ಪಾದ ಮುಟ್ಟಿ ಆಶೀರ್ವಾದ ಪಡೆಯುತ್ತಿರುವುದನ್ನು ಕಾಣಬಹುದು.
2019ರ ಫೋಟೋ ವೈರಲ್ : ಭಾವಚಿತ್ರದ ಹಿನ್ನೆಲೆ ನೋಡುವುದಾದರೆ, 2019ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ವಾರಣಾಶಿಯಿಂದ ಸ್ಪರ್ಧಿಸಿದ್ದರು. ಈ ವೇಳೆ ಎರಡನೇ ಬಾರಿಗೆ ನಾಮಪತ್ರ ಸಲ್ಲಿಸಲು ಕಾಶಿಗೆ ಆಗಮಿಸಿದ್ದ ಮೋದಿ ಅವರು ಪ್ರಕಾಶ್ ಸಿಂಗ್ ಬಾದಲ್ ಅವರನ್ನು ಭೇಟಿ ಮಾಡಿದ್ದರು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಬಾದಲ್ ಅವರ ಪಾದಮುಟ್ಟಿ ನಮಸ್ಕರಿಸಿದ್ದರು. ಪ್ರಧಾನಿ ಮೋದಿ ನಾಮಪತ್ರ ಸಲ್ಲಿಕೆ ವೇಳೆ ಪ್ರಕಾಶ್ ಸಿಂಗ್ ಬಾದಲ್ ಜೊತೆಗೆ ಆಗಿನ ಬಿಜೆಪಿ ಮೈತ್ರಿಕೂಟದ ಎಲ್ಲಾ ಮಿತ್ರಪಕ್ಷಗಳ ಪ್ರಮುಖ ನಾಯಕರೂ ಉಪಸ್ಥಿತರಿದ್ದರು.
ಪ್ರಕಾಶ್ ಸಿಂಗ್ ಬಾದಲ್ ಅವರ ಆಶೀರ್ವಾದ ಪಡೆದ ಬಳಿಕ ಮೋದಿ ನಾಮಪತ್ರ ಸಲ್ಲಿಸಲು ತೆರಳಿದ್ದರು. ಈ ಚಿತ್ರ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಮಿತ್ರ ಪಕ್ಷಗಳೊಂದಿಗೆ ಬಿಜೆಪಿಯ ಸಂಬಂಧ ಹೇಗೆ ಗಟ್ಟಿಯಾಗಿತ್ತು ಎಂಬ ಸಂದೇಶವನ್ನೂ ಈ ಮೂಲಕ ರವಾನಿಸಲಾಗಿತ್ತು. ಪ್ರಧಾನಿ ಮೋದಿ ಮತ್ತು ಪ್ರಕಾಶ್ ಸಿಂಗ್ ಬಾದಲ್ ನಿಕಟ ಸಂಬಂಧ ಹೊಂದಿದ್ದರು. ಜೊತೆಗೆ ಅವರನ್ನು ಬಹಳ ಗೌರವದಿಂದ ಕಾಣುತ್ತಿದ್ದರು.
ಇಂದು ಪ್ರಧಾನಿ ಮೋದಿಯವರು ಚಂಡೀಗಡಕ್ಕೆ ಆಗಮಿಸಿ ಪ್ರಕಾಶ್ ಸಿಂಗ್ ಬಾದಲ್ ಅವರಿಗೆ ಅಂತಿಮ ನಮನ ಸಲ್ಲಿಸಿದರು. ಬಾದಲ್ ಅವರ ಪಾರ್ಥಿವ ಶರೀರವನ್ನು ಚಂಡೀಗಢ ಸೆಕ್ಟರ್ 28ರ ಶಿರೋಮಣಿ ಅಕಾಲಿದಳದ ಕಚೇರಿಯಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿದೆ. ನಾಳೆ (ಗುರುವಾರ) ಮಧ್ಯಾಹ್ನ 1 ಗಂಟೆಗೆ ಹುಟ್ಟೂರಾದ ಬಾದಲ್ನಲ್ಲಿ ಅವರ ಅಂತ್ಯಕ್ರಿಯೆ ನೆರವೇರಲಿದೆ.
ರಾಷ್ಟ್ರೀಯ ಶೋಕಾಚರಣೆ : ಕೇಂದ್ರ ಸರ್ಕಾರವು ಪ್ರಕಾಶ್ ಸಿಂಗ್ ಬಾದಲ್ ಅವರ ನಿಧನಕ್ಕೆ ಸಂತಾಪ ಸೂಚಿಸಲು 2 ದಿನಗಳ ಕಾಲ ರಾಷ್ಟ್ರೀಯ ಶೋಕಾಚರಣೆಯನ್ನು ಘೋಷಿಸಿದೆ. ದೇಶಾದ್ಯಂತ ರಾಷ್ಟ್ರಧ್ವಜವನ್ನು ಅರ್ಧಕ್ಕೆ ಹಾರಿಸಲಾಗುತ್ತಿದ್ದು, ಎಲ್ಲಾ ಸರ್ಕಾರಿ ಮನರಂಜನಾ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ.
ಪಂಜಾಬ್‌ನಲ್ಲಿ ನಾಳೆ ರಜೆ : ಬಾದಲ್ ನಿಧನದ ಶೋಕಾಚರಣೆಯ ಹಿನ್ನೆಲೆಯಲ್ಲಿ ನಾಳೆ ಪಂಜಾಬ್‌ನಲ್ಲಿ ರಜೆ ಘೋಷಿಸಲಾಗಿದೆ. ಎಲ್ಲಾ ಸರ್ಕಾರಿ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ. ಶಿಕ್ಷಣ ಸಂಸ್ಥೆಗಳು, ಕಚೇರಿಗಳಿಗೆ ರಜೆ ನೀಡಲಾಗಿದೆ.
ಇದನ್ನೂ ಓದಿ : ಪ್ರಕಾಶ್ ಸಿಂಗ್ ಬಾದಲ್ಗೆ ಪಿಎಂ ಮೋದಿ ಅಂತಿಮ ನಮನ: 2 ದಿನ ರಾಷ್ಟ್ರೀಯ ಶೋಕಾಚರಣೆ, ನಾಳೆ ಅಂತ್ಯಕ್ರಿಯೆ