ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು 2022ರ ಜನವರಿಯಲ್ಲಿ ಅರಬ್ ಸಂಯುಕ್ತ ಸಂಸ್ಥಾನ-ಯುಎಇಗೆ ವರ್ಷದ ಮೊದಲ ಪ್ರವಾಸ ಕೈಗೊಳ್ಳಲಿದ್ದಾರೆ. ಭಾರತ ಮತ್ತು ಯುಎಇ ನಡುವಿನ ರಾಜತಾಂತ್ರಿಕ ಬಾಂಧವ್ಯಕ್ಕೆ 50ನೇ ವರ್ಷದ ಸಂಭ್ರಮಕ್ಕೆ ಕಾಲಿಡುತ್ತಿರುವ ಹಿನ್ನೆಲೆಯಲ್ಲಿ ಮೋದಿ ಅವರ ಈ ಪ್ರವಾಸ ಬಹುಮುಖ್ಯವಾಗಿದೆ. ಈ ವೇಳೆ ಅವರು ದುಬೈ ಎಕ್ಸ್‌ಪೋಗೂ ಭೇಟಿ ನೀಡಲಿದ್ದಾರೆ ಎನ್ನಲಾಗಿದೆ.
ಮೋದಿ ಅವರು ಜನವರಿ 6ಕ್ಕೆ ಯುಎಇ ಪ್ರವಾಸ ಕೈಗೊಳ್ಳುವ ನಿರೀಕ್ಷೆ ಇದ್ದು, ಉಭಯ ದೇಶಗಳ ಆರ್ಥಿಕ ಬಾಂಧವ್ಯದ ಉತ್ತೇಜನಕ್ಕಾಗಿ ಉಚಿತ ವಾಣಿಜ್ಯ ವ್ಯವಹಾರ ಒಪ್ಪಂದದ ಚರ್ಚೆ ನಡೆಯುವ ಸಾಧ್ಯತೆ ಇದೆ. ಭಾರತದಲ್ಲಿ ಹೂಡಿಕೆ ಹಾಗೂ ಮೂಲಸೌಕರ್ಯಗಳನ್ನು ನಿರ್ಮಿಸಲು ಯುಎಇ $100 ಬಿಲಿಯನ್ ಖರ್ಚು ಮಾಡಲು ಸಿದ್ಧವಾಗಿದೆ ಎಂದು ಮೂಲಗಳು ತಿಳಿಸಿವೆ.
2015ರಲ್ಲಿ ಯುಎಇಗೆ ಮೋದಿಯವರ ಭೇಟಿಯ ನಂತರ ಉಭಯ ದೇಶಗಳ ನಡುವಿನ ಸಂಬಂಧಗಳು ಗಣನೀಯ ಪ್ರಗತಿ ಕಂಡಿವೆ. ಪಾಲುದಾರಿಕೆಯಲ್ಲಿ ಹೊಸ ಯುಗದ ಆರಂಭವಾಗಿದ್ದು, ಬಲವಾದ ಕಾರ್ಯತಂತ್ರದ ಪಾಲುದಾರಿಕೆ ಹಂಚಿಕೊಳ್ಳುತ್ತವೆ. ಯುಎಇಗೆ ಯುಎಸ್ ನಂತರ ಭಾರತ ಎರಡನೇ ಅತಿದೊಡ್ಡ ರಫ್ತು ತಾಣವಾಗಿದೆ.
ಅಬುಧಾಬಿಯ ಕ್ರೌನ್ ಪ್ರಿನ್ಸ್ ಮತ್ತು ಯುಎಇ ಸಶಸ್ತ್ರ ಪಡೆಗಳ ಡೆಪ್ಯುಟಿ ಸುಪ್ರೀಂ ಕಮಾಂಡರ್ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು 2016ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದರು. ಗಣರಾಜ್ಯೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲು ಶೇಖ್ ಮೊಹಮ್ಮದ್ ಜನವರಿ 2017ರಲ್ಲೂ ಭಾರತಕ್ಕೆ ಬಂದಿದ್ದರು.
ಇದನ್ನೂ ಓದಿ: ದೇಶದಲ್ಲಿ ಹೆಚ್ಚಿದ ಕೋವಿಡ್: ಕೇಂದ್ರ ಸಚಿವರ ಮಂಡಳಿ ಜೊತೆ ಇಂದು ಮೋದಿ ಸಭೆ