ಢಾಕಾ/ಬಾಂಗ್ಲಾದೇಶ: ಮಾರ್ಚ್ 26 ರಂದು ಪ್ರಧಾನಿ ನರೇಂದ್ರ ಮೋದಿ ಢಾಕಾಗೆ ಭೇಟಿ ನೀಡಲಿದ್ದು, ಬಾಂಗ್ಲಾದೇಶದ ಸ್ವಾತಂತ್ರ್ಯದ ಸುವರ್ಣ ಮಹೋತ್ಸವ ಮತ್ತು ಬಂಗಬಂಧು ಶೇಖ್ ಮುಜಿಬುರ್ ರಹಮಾನ್ ಅವರ ಜನ್ಮ ಶತಮಾನೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಬಾಂಗ್ಲಾದೇಶ ವಿದೇಶಾಂಗ ಸಚಿವ ಎ.ಕೆ. ಅಬ್ದುಲ್ ಮೊಮೆನ್ ಶುಕ್ರವಾರ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಢಾಕಾ ಭೇಟಿಯ ಸಂದರ್ಭದಲ್ಲಿ ಬಾಂಗ್ಲಾದೇಶ ಮತ್ತು ಭಾರತ ನಡುವೆ ಬಗೆಹರಿಯದ ಯಾವುದೇ ದ್ವಿಪಕ್ಷೀಯ ವಿಷಯಗಳ ಬಗ್ಗೆ ಚರ್ಚಿಸಲಾಗುವುದಿಲ್ಲ. ಭಾರತದ ಪ್ರಧಾನಿ ಮೋದಿ ನಮ್ಮ ದೇಶಕ್ಕೆ ಬರುತ್ತಿರುವುದು ನಮಗೆ ಸಂತೋಷವಾಗಿದೆ. ಇದು ರಾಜತಾಂತ್ರಿಕ ಪ್ರಬುದ್ಧತೆಯನ್ನು ತೋರಿಸುತ್ತದೆ ಎಂದು ಮೊಮೆನ್ ಹೇಳಿದ್ದಾರೆ.
ಕೋವಿಡ್-19 ಅವಧಿಯಲ್ಲಿ ಇದು ಪಿಎಂ ಮೋದಿಯವರ ಮೊದಲ ವಿದೇಶ ಪ್ರವಾಸವಾಗಿದೆ. ಮೂಲಗಳ ಪ್ರಕಾರ ಮಾರ್ಚ್ 26 ರಂದು ಪ್ರಧಾನಿ ಮೋದಿ ಢಾಕಾ ತಲುಪಲಿದ್ದು, 27 ರಂದು ಢಾಕಾ ಹಿಂದೂ ದೇವಾಲಯಗಳಿಗೆ ಭೇಟಿ ನೀಡಲಿದ್ದಾರೆ. ನಂತರ ಬಂಗಬಂಧು ಶೇಖ್ ಮುಜಿಬರ್ ರಹಮಾನ್ ಅವರ ಸಮಾಧಿಸ್ಥಳಕ್ಕೆ ಭೇಟಿ ನೀಡಿ ಗೌರವವಂದನೆ ಸಲ್ಲಿಸಲಿದ್ದಾರೆ.
ಶ್ರೀಲಂಕಾ, ನೇಪಾಳ, ಭೂತಾನ್ ಮತ್ತು ಮಾಲ್ಡೀವ್ಸ್ ಮುಖ್ಯಸ್ಥರು ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಕಳೆದ ವರ್ಷ ಬಂಗಬಂಧು ಶೇಖ್ ಮುಜಿಬುರ್ ರಹಮಾನ್ ಅವರ ಜನ್ಮ ಶತಮಾನೋತ್ಸವದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳಬೇಕಿತ್ತು. ಆದರೆ ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಬಾಂಗ್ಲಾ ಭೇಟಿ ರದ್ದುಗೊಂಡಿತು.