ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬೆಳಗ್ಗೆ 11 ಗಂಟೆಗೆ ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ 'ಮನ್ ಕಿ ಬಾತ್'ನ ಹೊಸ ಸಂಚಿಕೆಯಲ್ಲಿ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಕಾರ್ಯಕ್ರಮವನ್ನು ಆಕಾಶವಾಣಿ ಮತ್ತು ದೂರದರ್ಶನದ ಎಲ್ಲ ನಿಲಯಗಳು ಏಕಕಾಲಕ್ಕೆ ಪ್ರಸಾರ ಮಾಡಲಿವೆ. ಆಲ್ ಇಂಡಿಯಾ ರೇಡಿಯೋ ನ್ಯೂಸ್, ಡಿಡಿ ನ್ಯೂಸ್, ಪಿಎಂಒ ಮತ್ತು ಮಾಹಿತಿ ಪ್ರಸಾರ ಇಲಾಖೆಯ ಸಚಿವಾಲಯದ ಯುಟ್ಯೂಬ್ ಚಾನೆಲ್ಗಳಲ್ಲಿಯೂ ಪ್ರಸಾರವಾಗಲಿದೆ.
ಕಳೆದ ತಿಂಗಳು ನಡೆದ 88ನೇ ಸಂಚಿಕೆಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಇತ್ತೀಚೆಗೆ ಉದ್ಘಾಟನೆಗೊಂಡ "ಪ್ರಧಾನಮಂತ್ರಿ ಸಂಗ್ರಹಾಲಯ" ವಿಚಾರ ಪ್ರಸ್ತಾಪಿಸಿ, ಮಾಜಿ ಪ್ರಧಾನಿಗಳ ಕೊಡುಗೆಗಳನ್ನು ಮೋದಿ ಸ್ಮರಿಸಿದ್ದರು. 'ಮನ್ ಕಿ ಬಾತ್' ಕಾರ್ಯಕ್ರಮದ ಮೊದಲ ಸಂಚಿಕೆ ಅಕ್ಟೋಬರ್ 3, 2014ರಲ್ಲಿ ಪ್ರಸಾರವಾಗಿತ್ತು.
ಪ್ರತಿ ತಿಂಗಳ ಕೊನೆಯ ಭಾನುವಾರ ಮೋದಿ ಅವರು ರೇಡಿಯೋ ಮೂಲಕ ದೇಶದ ಜನರನ್ನು ಉದ್ದೇಶಿಸಿ ಮಾತನಾಡುತ್ತಾರೆ. ಜನರಿಗೆ ಆಡಳಿತದ ಬಗ್ಗೆ ಮಾಹಿತಿ ಕೊಡುವುದು, ವಿವಿಧ ವಿಷಯಗಳ ಬಗ್ಗೆ ತಿಳಿಸಿಕೊಡುವುದು ಹಾಗು ದೇಶದ ಪ್ರಜೆಗಳಿಂದ ಸಲಹೆ ಸ್ವೀಕರಿಸುವುದು ಈ ಕಾರ್ಯಕ್ರಮದ ಉದ್ದೇಶ.
ಇದನ್ನೂ ಓದಿ: ಪ್ರಧಾನಮಂತ್ರಿ ಸಂಗ್ರಹಾಲಯ ಉದ್ಘಾಟಿಸಿ, ಮೊದಲ ಟಿಕೆಟ್ ಖರೀದಿಸಿದ ಪಿಎಂ ಮೋದಿ