ರಾಯಪುರ (ಛತ್ತೀಸ್‌ಗಢ): 'ಮಹಾದೇವ್' ಬೆಟ್ಟಿಂಗ್ ಆ್ಯಪ್ ಹಗರಣವನ್ನು ಪ್ರಸ್ತಾಪಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ನಾಯಕರು 'ಮಹಾದೇವ' ಹೆಸರನ್ನೂ ಉಳಿಸುತ್ತಿಲ್ಲ. ಬೆಟ್ಟಿಂಗ್ ಆ್ಯಪ್ ಪ್ರಕರಣದ ಆರೋಪಿಗಳೊಂದಿಗೆ ಕಾಂಗ್ರೆಸ್ ಸಿಎಂ ಏನು ಸಂಪರ್ಕ ಹೊಂದಿದ್ದಾರೆ ಎಂಬುದನ್ನು ತಿಳಿಸಬೇಕೆಂದು ಆಗ್ರಹಿಸಿದ್ದಾರೆ.
ದುರ್ಗ್ ಪಟ್ಟಣದಲ್ಲಿ ಶನಿವಾರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಬೆಟ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಮಹಾದೇವ್ ಬೆಟ್ಟಿಂಗ್ ಆ್ಯಪ್ ಪ್ರವರ್ತಕರು ಛತ್ತೀಸ್‌ಗಢ ಸಿಎಂ ಬಘೇಲ್ ಅವರಿಗೆ ಇದುವರೆಗೆ ಸುಮಾರು 508 ಕೋಟಿ ರೂ.ಗಳನ್ನು ಪಾವತಿಸಿದ್ದಾರೆ ಎಂಬ ವಿಧಿವಿಜ್ಞಾನ ವಿಶ್ಲೇಷಣೆ ಮತ್ತು ಕ್ಯಾಶ್ ಕೊರಿಯರ್ ನೀಡಿದ ಹೇಳಿಕೆಯಿಂದ ಗೊತ್ತಾಗಿದೆ ಎಂಬ ಜಾರಿ ನಿರ್ದೇಶನಾಲಯ (ಇಡಿ) ತಿಳಿದ ಮರು ದಿನವೇ ಮೋದಿ, ಈ ಟೀಕಾಪ್ರಹಾರ ಮಾಡಿದರು.
ಎರಡು ದಿನಗಳ ಹಿಂದೆಯಷ್ಟೇ ರಾಯಪುರದಲ್ಲಿ (ಜಾರಿ ನಿರ್ದೇಶನಾಲಯದಿಂದ) ಮಹತ್ವದ ಕ್ರಮ ಕೈಗೊಳ್ಳಲಾಗಿದ್ದು, ಭಾರೀ ಪ್ರಮಾಣದ ನಗದನ್ನು ವಶಪಡಿಸಿಕೊಳ್ಳಲಾಗಿದೆ. ಇದು ಬೆಟ್ಟಿಂಗ್‌ನಲ್ಲಿ ತೊಡಗಿರುವವರಿಗೆ ಸೇರಿದ ಹಣ ಎಂದು ಜನರು ಹೇಳುತ್ತಿದ್ದಾರೆ. ಛತ್ತೀಸ್‌ಗಢದ ಜನರನ್ನು ಲೂಟಿ ಮಾಡಿ ಈ ಹಣ ಸಂಗ್ರಹಿಸಿದ್ದಾರೆ. ಈ ಬೆಟ್ಟಿಂಗ್ ಆ್ಯಪ್ ಹಣದಿಂದ ಕಾಂಗ್ರೆಸ್ ನಾಯಕರು ತಮ್ಮ ಬೊಕ್ಕಸ ತುಂಬಿಸಿಕೊಳ್ಳುತ್ತಿದ್ದಾರೆ ಎಂದು ದೂರಿದರು.
ನೇರವಾಗಿ ಸಿಎಂ ಬಘೇಲ್ ಹೆಸರನ್ನು ಉಲ್ಲೇಖಿಸಿದ ಪ್ರಧಾನಿ, ದುಬೈನಲ್ಲಿ ಕುಳಿತಿರುವ ಈ ಹಗರಣದ ಆರೋಪಿಗಳಿಗೂ, ಅವರಿಗೂ ಏನು ಸಂಬಂಧ ಎಂದು ಛತ್ತೀಸ್‌ಗಢದ ಜನತೆಗೆ ಕಾಂಗ್ರೆಸ್ ಸರ್ಕಾರ ಮತ್ತು ಮುಖ್ಯಮಂತ್ರಿ ಹೇಳಬೇಕು. ಕಾಂಗ್ರೆಸ್‌ನ ಆದ್ಯತೆಯು ಭ್ರಷ್ಟಾಚಾರದಲ್ಲಿ ತೊಡಗಿ ತನ್ನ ಬೊಕ್ಕಸವನ್ನು ತುಂಬಿಸುವುದಾಗಿದೆ. ಕಾಂಗ್ರೆಸ್ ಸರ್ಕಾರದ ಪ್ರತಿಯೊಂದು ಕೆಲಸದಲ್ಲಿ 30 ಪರ್ಸೆಂಟ್ ಕಮಿಷನ್ ನಡೆದಿದೆ ಎಂದು ಆರೋಪಿಸಿದರು.
ಇದೇ ವೇಳೆ, ನನಗೆ ದೇಶದ ದೊಡ್ಡ ಜಾತಿ ಎಂದರೆ ಬಡವರು. ನಾನು ಬಡವರ ಸೇವಕ. ರಾಜಕೀಯ ಪಕ್ಷಗಳು ಬಡವರನ್ನು ಒಡೆದು ಜಾತೀಯತೆಯ ವಿಷವನ್ನು ಹರಡಲು ಹೊಸ ಷಡ್ಯಂತ್ರಗಳನ್ನು ರೂಪಿಸುತ್ತಿವೆ ಎಂದು ಮೋದಿ ದೂರಿದರು. ಕಾಂಗ್ರೆಸ್ ಬಡವರ ಕಲ್ಯಾಣವನ್ನು ಬಯಸುವುದಿಲ್ಲ ಮತ್ತು ಅವರ ಸ್ಥಿತಿ ಸುಧಾರಿಸಲು ಬಯಸುವುದಿಲ್ಲ. ಕಾಂಗ್ರೆಸ್ ಒಬಿಸಿ ಪ್ರಧಾನ ಮಂತ್ರಿಯನ್ನು ನಿಂದಿಸಿದೆ. ಕಾಂಗ್ರೆಸ್ ಒಬಿಸಿ ಸಮುದಾಯವನ್ನು ಏಕೆ ನಿಂದಿಸುತ್ತದೆ?, ಛತ್ತೀಸ್‌ಗಢದ ಪ್ರಭಾವಿ ಒಬಿಸಿ ಸಮುದಾಯವನ್ನು ಅವರು ಕಳ್ಳರು ಎಂದು ಏಕೆ ಕರೆಯುತ್ತಾರೆ ಎಂದು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ 80 ಕೋಟಿ ಬಡವರಿಗೆ ತಮ್ಮ ಸರ್ಕಾರದ ಉಚಿತ ಪಡಿತರ ಯೋಜನೆ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ನು ಮುಂದಿನ ಐದು ವರ್ಷಗಳವರೆಗೆ ವಿಸ್ತರಿಸಲಾಗುವುದು ಎಂದು ಪ್ರಧಾನಿ ಮೋದಿ ಘೋಷಿಸಿದರು. 90 ಸದಸ್ಯ ಬಲದ ಛತ್ತೀಸ್‌ಗಢ ವಿಧಾನಸಭೆಗೆ ನವೆಂಬರ್ 7 ಮತ್ತು 17ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ.
ಇದನ್ನೂ ಓದಿ: ಚುನಾವಣಾ ಪ್ರಚಾರ ಸಭೆಯಲ್ಲಿ ರೇಖಾಚಿತ್ರ ಹಿಡಿದು ಗಮನ ಸೆಳೆದ ಬಾಲಕಿಗೆ ಪ್ರಧಾನಿ ಮೋದಿ ಪತ್ರ