ನವದೆಹಲಿ: ವಿಧಾನಸಭಾ ಚುನಾವಣೆ ನಡೆಯುತ್ತಿದ್ದು ಇಂದು ಪಶ್ಚಿಮ ಬಂಗಾಳದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಾರ್ವಜನಿಕ ರ‍್ಯಾಲಿ ಉದ್ದೇಶಿಸಿ ಮಾತನಾಡಲಿದ್ದಾರೆ.
ಮಧ್ಯಾಹ್ನ 12 ಗಂಟೆಗೆ ಪ್ರಧಾನಿ ಪುರ್ಬಾ ಬರ್ಧಮಾನ್ ಜಿಲ್ಲೆಯ ತಾಲಿತ್ ಸಾಯಿ ಕೇಂದ್ರದಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡಲಿದ್ದಾರೆ. ನಂತರ ಮಧ್ಯಾಹ್ನ 1.40ಕ್ಕೆ ನಾಡಿಯ ಜಿಲ್ಲೆಯ ಕಲ್ಯಾಣಿ ವಿಶ್ವವಿದ್ಯಾಲಯ ಮೈದಾನ ಮತ್ತು ಮಧ್ಯಾಹ್ನ 3.10ಕ್ಕೆ ಉತ್ತರ 24 ಪರಗಣ ಜಿಲ್ಲೆಯ ಬರಸತ್ ಪ್ರದೇಶದಲ್ಲಿ ಕ್ಯಾಂಪೇನ್ ನಡೆಸಲಿದ್ದಾರೆ.
ಅಮಿತ್ ಶಾ ಮತ ಪ್ರಚಾರ
ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಪ್ರಚಾರ ನಡೆಸಲಿದ್ದು, ಬೆಳಗ್ಗೆ 11:30 ಕ್ಕೆ ಕಾಲಿಂಪಾಂಗ್ ಜಿಲ್ಲೆಯಲ್ಲಿ ರೋಡ್ ಶೋ ನಡೆಸಲಿದ್ದಾರೆ. ನಂತರ ಅವರು ಜಲ್ಪೈಗುರಿ ಜಿಲ್ಲೆಯ ಧೂಪ್ಗುರಿ ಪ್ರದೇಶದಲ್ಲಿ ಮತ್ತು ಹೆಮತಾಬಾದ್ ವಿಧಾನಸಭಾ ಕ್ಷೇತ್ರದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ನಂತರ ಸಿಲಿಗುರಿಯಲ್ಲಿ ರೋಡ್ ಶೋ ನಡೆಸಲಿದ್ದಾರೆ.
ಬಂಗಾಳದ ಚುನಾವಣೆ ವೇಳಾಪಟ್ಟಿ:
ಪಶ್ಚಿಮ ಬಂಗಾಳದಲ್ಲಿ ಮೊದಲ ನಾಲ್ಕು ಹಂತಗಳ ಮತದಾನ ಮುಕ್ತಾಯವಾಗಿದೆ.
ಮುಂಬರುವ ಐದನೇ ಮತ್ತು ಆರನೇ ಹಂತಗಳು ಏಪ್ರಿಲ್ 17 ಮತ್ತು ಏಪ್ರಿಲ್ 22 ರಂದು ನಡೆಯಲಿವೆ. ಮೇ 2 ರಂದು ಮತ ಎಣಿಕೆ ನಡೆಯಲಿದೆ.
ವ್ಯಾಪಕ ಹಿಂಸಾಚಾರ:
4ನೇ ಸುತ್ತಿನ ಮತದಾನದ ಸಂದರ್ಭದಲ್ಲಿ ಕೂಚ್ ಬೆಹಾರ್‌ದಲ್ಲಿ ಭಾರಿ ಹಿಂಸಾಚಾರ ನಡೆದಿದೆ. ಮತದಾನದ ವೇಳೆ ಘರ್ಷಣೆ ಉಂಟಾಗಿದ್ದು, ಸಿಆರ್‌ಪಿಎಫ್ ಯೋಧರು ಗುಂಡು ಹಾರಿಸಿದ್ದರು. ಪರಿಣಾಮ, ನಾಲ್ವರು ಟಿಎಂಸಿ ಕಾರ್ಯಕರ್ತರು ಬಲಿಯಾಗಿದ್ದರು. ಶಾಂತಿಯುತ ಮತದಾನ ನಡೆಯುತ್ತಿದ್ದಾಗ ಸಿಆರ್‌ಪಿಎಫ್ ಯೋಧರು ಗುಂಡು ಹಾರಿಸಿದ್ದೇಕೆ? ಎಂದು ಟಿಎಂಸಿ ಪ್ರಶ್ನಿಸಿದೆ.