ನವದೆಹಲಿ: ಮೂರು ದಿನಗಳ ಯುರೋಪಿಯನ್ ರಾಷ್ಟ್ರಗಳ ಪ್ರವಾಸ ಮುಗಿಸಿ ಗುರುವಾರ ಹಿಂದಿರುಗಿದ ಪ್ರಧಾನಿ ನರೇಂದ್ರ ಮೋದಿ ಅವರು ಏರುತ್ತಿರುವ ತಾಪಮಾನ ಹಾಗೂ ಮುಂಬರುವ ಮುಂಗಾರು ಹಂಗಾಮಿನ ಸಿದ್ಧತೆಗಳನ್ನು ಪರಿಶೀಲಿಸುವ ಮಹತ್ವದ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ದೇಶದ ಹಲವಾರು ಭಾಗಗಳು ಕಳೆದ ಕೆಲವು ವಾರಗಳಿಂದ ತೀವ್ರವಾದ ಶಾಖದ ಅಲೆಯಲ್ಲಿ ತತ್ತರಿಸುತ್ತಿವೆ. ಹಲವಾರು ಸ್ಥಳಗಳಲ್ಲಿ ತಾಪಮಾನವು ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿದೆ. ಸರಾಸರಿ ಗರಿಷ್ಠ ತಾಪಮಾನವು ವಾಯುವ್ಯ ಮತ್ತು ಮಧ್ಯ ಭಾರತದಲ್ಲಿ ಕ್ರಮವಾಗಿ 35.9 ಮತ್ತು 37.78 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದೆ ಹಾಗೂ ದೇಶದ ಎರಡೂ ಪ್ರದೇಶಗಳು 122 ವರ್ಷಗಳಲ್ಲಿ ಅತ್ಯಂತ ಬಿಸಿಗಾಳಿಯ ಪರಿಣಾಮಗಳನ್ನು ಎದುರಿಸುತ್ತಿವೆ.
ಬುಧವಾರದಂದು ದೆಹಲಿಯ ಕೆಲವು ಭಾಗಗಳಲ್ಲಿ ಆಲಿಕಲ್ಲು ಮಳೆ ಸುರಿದಿದೆ. ಇನ್ನು ಭಾರತೀಯ ಹವಾಮಾನ ಇಲಾಖೆಯ (IMD) ಹಿರಿಯ ವಿಜ್ಞಾನಿ ಆರ್‌ಕೆ ಜೆನಮಣಿ ಅವರ ಮುನ್ಸೂಚನೆಯಂತೆ ಮೇ 7 ರ ನಂತರ ಶಾಖದ ಅಲೆಯು ಮತ್ತೇ ಮರಳುವ ಸಾಧ್ಯತೆಯಿದೆ ಎನ್ನಲಾಗಿದೆ.
ಮಾರ್ಚ್ 2022 ರಲ್ಲಿ ಭಾರತದಲ್ಲಿ ಸರಾಸರಿ ತಾಪಮಾನವು ಸುಮಾರು 33 ಡಿಗ್ರಿ ಸೆಲ್ಸಿಯಸ್ ಆಗಿತ್ತು. ಇದು 1902 ರಲ್ಲಿ ಸಂಭವಿಸಿತ್ತು. ಈಗ ಹಲವು ವರ್ಷಗಳ ನಂತರ ಮಾರ್ಚ್ನಲ್ಲಿ ಈ ಶಾಖದ ಅಲೆ ಕಂಡು ಬಂದಿದೆ. ದೆಹಲಿಯಂತಹ ಪ್ರಮುಖ ನಗರಗಳಲ್ಲಿ ತಾಪಮಾನವು 45 ಡಿಗ್ರಿ ಸೆಲ್ಸಿಯಸ್‌ಗೆ ಏರಿದೆ. ಈ ತಾಪಮಾನಗಳು ಏಪ್ರಿಲ್‌ನಲ್ಲಿ ಸಾಮಾನ್ಯ ಹೆಚ್ಚಿನ ತಾಪಮಾನಕ್ಕಿಂತ 10 ಡಿಗ್ರಿ ಸೆಲ್ಸಿಯಸ್ ಹೆಚ್ಚಿತ್ತು.
ಇದನ್ನೂ ಓದಿ: ಎಲ್‌ಒಸಿಯಲ್ಲಿ ಶಾರದಾ ದೇವಿ ದೇವಾಲಯದ ಪುನರುತ್ಥಾನ ಕೆಲಸ ಆರಂಭ: ಪಾಕ್ನಿಂದಲೂ ಸಹಕಾರ!