ನವದೆಹಲಿ: ಇಂದಿನಿಂದ ಹೊಸ ಸಂಸತ್ ಭವನಕ್ಕೆ ಕಲಾಪಗಳು ಸ್ಥಳಾಂತರಗೊಂಡಿವೆ. ಹಳೆಯ ಸಂಸತ್ತಿನ ಕಟ್ಟಡದಲ್ಲಿರುವ ಐತಿಹಾಸಿಕ ಸೆಂಟ್ರಲ್ ಹಾಲ್‌ನಲ್ಲಿ ಲೋಕಸಭೆ ಹಾಗೂ ರಾಜ್ಯಸಭೆ ಸದಸ್ಯರನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿ, ಹಳೆ ಸಂಸತ್ ಭವನವನ್ನು 'ಸಂವಿಧಾನ ಸದನ್' ಎಂದು ಹೆಸರಿಸಿದರು.
''1952ರಿಂದ ಪ್ರಪಂಚಾದ್ಯಂತದ 41 ರಾಷ್ಟಗಳ ಮುಖ್ಯಸ್ಥರು ಇದೇ ಸೆಂಟ್ರಲ್ ಹಾಲ್‌ನಲ್ಲಿ ನಮ್ಮ ಸಂಸದರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಕಳೆದ ಏಳು ದಶಕಗಳಲ್ಲಿ 4,000ಕ್ಕೂ ಹೆಚ್ಚು ಕಾನೂನುಗಳನ್ನು ಸಂಸತ್ತು ಅಂಗೀಕರಿಸಿದೆ. ನಾವು ಹೊಸ ಸಂಸತ್ ಕಟ್ಟಡಕ್ಕೆ ಹೋಗುತ್ತಿದ್ದಂತೆ ಹಳೆಯ ಕಟ್ಟಡದ ಪ್ರತಿಷ್ಠೆಯನ್ನೂ ಕಾಪಾಡಿಕೊಳ್ಳಬೇಕು'' ಎಂದು ಪ್ರಧಾನಿ ಕಿವಿಮಾತು ಹೇಳಿದರು.
''2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಬದ್ಧತೆ ಹೊಂದಿದ್ದೇವೆ. ಹೊಸ ಸಂಸತ್ತಿನ ಕಟ್ಟಡವು ಹೊಸ ಭವಿಷ್ಯದತ್ತ ಹೊಸ ಆರಂಭ. 'ಜಗತ್ತಿನ ಸ್ನೇಹಿತ' ಎಂಬ ಸ್ಥಾನದಲ್ಲಿದ್ದೇವೆ. ಜಾಗತಿಕ ಪೂರೈಕೆ ಸರಪಳಿಗಳಲ್ಲಿ ಪ್ರಮುಖ ಪಾತ್ರ ಹೊಂದಿದ್ದು, ನಮ್ಮ ಎಲ್ಲ ನಾಗರಿಕರಿಗೆ ನೆರವು ಕಲ್ಪಿಸುವ ಮೂಲಕ ಪ್ರಮುಖ ವೇದಿಕೆಗಳಲ್ಲಿ 'ವಿಶ್ವದ ಸ್ನೇಹಿತ' ಎಂಬ ಸ್ಥಾನ ಪಡೆಯಲು ಸಹಕಾರಿಯಾಗಿದೆ'' ಎಂದರು.
''ಇಡೀ ಪ್ರಪಂಚದ ಕಣ್ಣುಗಳು ಭಾರತದ ಮೇಲಿವೆ. ಶೀತಲ ಸಮರದ ಸಮಯದಲ್ಲಿ ನಾವು ಅಲಿಪ್ತರಾಗಿದ್ದೆವು. ಈಗ ನಮಗೆ ವಿಭಿನ್ನ ಸ್ಥಾನಮಾನವಿದೆ. 'ವಿಶ್ವದ ಮಿತ್ರ'ರಾಗಿ ಮುನ್ನಡೆಯುತ್ತಿದ್ದೇವೆ. ರಕ್ಷಣೆ ಮತ್ತು ಉತ್ಪಾದನಾ ಕ್ಷೇತ್ರಗಳಲ್ಲಿ 'ಆತ್ಮನಿರ್ಭರ ಭಾರತ' ಎಂಬ ನಮ್ಮ ಸಂಕಲ್ಪವನ್ನು ಸಾಧಿಸುವುದು ಇಂದಿನ ಅಗತ್ಯ. ನಾವು ಆತ್ಮನಿರ್ಭರ್ ಆಗಬೇಕೆಂದು ಯಾವ ಭಾರತೀಯನು ಬಯಸುವುದಿಲ್ಲ, ಹೇಳಿ?'' ಎಂದು ಮೋದಿ ಕೇಳಿದರು.
''ಸಾಮಾಜಿಕ ನ್ಯಾಯವಿಲ್ಲದೆ ನಾವು ನಮ್ಮ ಗುರಿಗಳನ್ನು ಸಾಧಿಸಲು ಸಾಧ್ಯವಿಲ್ಲ. ಆದರೆ ಸಾಮಾಜಿಕ ನ್ಯಾಯದ ಬಗ್ಗೆ ಚರ್ಚೆಯನ್ನು ಕಿರಿದುಗೊಳಿಸಲಾಗಿದೆ. ಅದನ್ನು ವಿಸ್ತರಿಸಬೇಕು. ನಾವು ಸಮಾನ ಅಭಿವೃದ್ಧಿಯನ್ನು ನಂಬುತ್ತೇವೆ. ಒಂದು ಭಾಗ ಹಿಂದುಳಿದಿದ್ದರೂ ಭಾರತದ ಸಮೃದ್ಧಿ ಅಪೂರ್ಣ. ಸಾಮಾಜಿಕ ನ್ಯಾಯಕ್ಕೆ ನಮ್ಮ ಆದ್ಯತೆ. ಸಾಮಾಜಿಕ ನ್ಯಾಯ, ಸಮತೋಲನ ಹಾಗೂ ಸಮಾನತೆ ಇಲ್ಲದೆ ನಾವು ಬಯಸಿದ ಫಲಿತಾಂಶಗಳನ್ನೂ ಸಾಧಿಸಲು ಸಾಧ್ಯವಿಲ್ಲ'' ಎಂದು ಪ್ರಧಾನಿ ಹೇಳಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಉಪರಾಷ್ಟ್ರಪತಿ ಹಾಗು ರಾಜ್ಯಸಭಾ ಸಭಾಪತಿ ಜಗದೀಪ್ ಧನಕರ್, ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ, ರಾಜ್ಯಸಭೆ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ, ಸಂಸದ ಅಧೀರ್ ರಂಜನ್ ಚೌಧರಿ, ರಾಜ್ಯಸಭೆಯಲ್ಲಿ ಬಿಜೆಪಿ ನಾಯಕರಾದ ಸಚಿವ ಪಿಯೂಷ್ ಗೋಯಲ್ ಹಾಗೂ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಹ್ಲಾದ್ ಜೋಶಿ ಉಪಸ್ಥಿತರಿದ್ದರು.
ಇದನ್ನೂ ಓದಿ: ಹಳೆ ಸಂಸತ್ ಭವನಕ್ಕೆ ಗುಡ್ ಬೈ: ಲೋಕಸಭಾ, ರಾಜ್ಯಸಭಾ ಸದಸ್ಯರ ಗ್ರೂಪ್ ಫೋಟೋ