ನವದೆಹಲಿ: ಮಹಿಳೆಯರು ಸಬಲೀಕರಣಗೊಂಡರೆ ಕುಟುಂಬದ ಜೊತೆಗೆ ಸಮಾಜವೂ ಸುಧಾರಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 'ಆತ್ಮನಿರ್ಭರ್ ನಾರಿ ಶಕ್ತಿ ಸೆ ಸಂವಾದ' ಕಾರ್ಯಕ್ರಮದಲ್ಲಿ ಪ್ರಧಾನಿ ಈ ವಾಖ್ಯಾನ ಮಾಡಿದ್ದಾರೆ. ನಿನ್ನೆ ನಡೆದ ಈ ವರ್ಚುವಲ್ ಸಭೆಯಲ್ಲಿ ಮೋದಿ ದೇಶಾದ್ಯಂತ ವಿವಿಧ ಸ್ವಸಹಾಯ ಸಂಘಗಳ ಮಹಿಳೆಯರನ್ನು ಭೇಟಿಯಾಗಿದ್ದಾರೆ.
ಮಹಿಳಾ ಸಬಲೀಕರಣದೊಂದಿಗೆ, ಕುಟುಂಬ ಮಾತ್ರವಲ್ಲದೆ ಇಡೀ ಸಮಾಜವು ಸುಧಾರಿಸುತ್ತದೆ. ದೇಶವೂ ಅಭಿವೃದ್ಧಿಯಾಗುತ್ತದೆ. ಮಹಿಳೆಯರು ತಮ್ಮ ಶಕ್ತಿ ಮತ್ತು ಸಾಮರ್ಥ್ಯಗಳೊಂದಿಗೆ ಯಾವುದೇ ಬದಲಾವಣೆ ತರಲು ಸಾಧ್ಯವಾಗುತ್ತದೆ. ಅವರ ಪ್ರಯತ್ನಗಳಿಗೆ ಸರಿಯಾದ ಮನ್ನಣೆ ಸಿಗಬೇಕು ಎಂದಿದ್ದಾರೆ.
ದೇಶದ 4 ಲಕ್ಷಕ್ಕೂ ಹೆಚ್ಚು ಮಹಿಳಾ ಗುಂಪುಗಳಿಗೆ ಪ್ರಧಾನ ಮಂತ್ರಿಗಳು 1,625 ಕೋಟಿ ರೂ.ಗಳ ಆರ್ಥಿಕ ಸಹಾಯವನ್ನು ಮಂಜೂರು ಮಾಡಿದ್ದಾರೆ. ಇದರ ಜೊತೆಗೆ 75 ಮಹಿಳಾ ರೈತರಿಗೆ 4.13 ಕೋಟಿ ರೂ.ಗಳ ಸಹಾಯವನ್ನು ಬಿಡುಗಡೆ ಮಾಡಿದ್ದಾರೆ.