ಢಾಕಾ (ಬಾಂಗ್ಲಾದೇಶ): ಪ್ರಧಾನಿ ನರೇಂದ್ರ ಮೋದಿ ಬಾಂಗ್ಲಾ ದೇಶದ ಸತ್ಖಿರಾ ಜಿಲ್ಲೆಯ ಈಶ್ವರಿಪುರದ ಜೆಶೋರೇಶ್ವರಿ ಕಾಳಿ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.
ಜೆಶೋರೇಶ್ವರಿ ಕಾಳಿ ದೇವಸ್ಥಾನವು ಈಶ್ವರಿಪುರದ ಪ್ರಸಿದ್ಧ ಹಿಂದೂ ದೇವಾಲಯವಾಗಿದೆ. ಇದು ಸತ್ಖಿರಾದ ಉಪಜಿಲ್ಲೆ ಶ್ಯಾಮ್ ನಗರದಲ್ಲಿರುವ ಹಳ್ಳಿ. ಈ ದೇವಾಲಯವು ಭಾರತ ಮತ್ತು ನೆರೆಯ ದೇಶಗಳಲ್ಲಿರುವ 51 ಶಕ್ತಿ ಪೀಠಗಳಲ್ಲಿ ಒಂದಾಗಿದೆ.
ಎರಡು ದಿನಗಳ ಬಾಂಗ್ಲಾ ಪ್ರವಾಸದಲ್ಲಿರುವ ಪ್ರಧಾನಿ, ಓರ್ಕಂಡಿ ದೇವಸ್ಥಾನ ಮತ್ತು ಗೋಪಾಲ್‌ಗಂಜ್ ಜಿಲ್ಲೆಯ ತುಂಗಿಪಾರದಲ್ಲಿರುವ 'ರಾಷ್ಟ್ರಪಿತ ಶೇಖ್ ಮುಜಿಬುರ್ ರೆಹಮಾನ್' ಸಮಾಧಿಗೂ ಭೇಟಿ ನೀಡಲಿದ್ದಾರೆ.
ದೇವಾಲಯಗಳಿಗೆ ಭೇಟಿ ನೀಡಿದ ನಂತರ ಪ್ರಧಾನಿ ಮೋದಿ, ತಮ್ಮ ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಈ ವೇಳೆ ಕೆಲವು ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕುವ ಸಾಧ್ಯತೆಯಿದೆ. ನಂತರ ಅವರು ಬಾಂಗ್ಲಾದೇಶ ಅಧ್ಯಕ್ಷ ಅಬ್ದುಲ್ ಹಮೀದ್ ಅವರನ್ನು ಭೇಟಿ ಮಾಡಲಿದ್ದಾರೆ.
ಕೋವಿಡ್ ಬಳಿಕ ಮೊದಲ ಬಾರಿಗೆ ಎರಡು ದಿನಗಳ ಬಾಂಗ್ಲಾ ಪ್ರವಾಸ ಕೈಗೊಂಡಿರುವ ಪ್ರಧಾನಿ ಮೋದಿ ಅವರನ್ನು ಢಾಕಾದ ಹಜರತ್ ಶಹಜಲಾಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಸ್ವಾಗತಿಸಿದರು.