ನವದೆಹಲಿ: ಆಸ್ಟ್ರೇಲಿಯಾ ಪ್ರಧಾನಮಂತ್ರಿಯ ವಿಶೇಷ ವ್ಯಾಪಾರ ರಾಯಭಾರಿಯಾಗಿ ಭಾರತಕ್ಕೆ ಆಗಮಿಸಿದ ಮಾಜಿ ಪ್ರಧಾನಿ ಟೋನಿ ಅಬ್ಬಾಟ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಗುರುವಾರ ಭೇಟಿಯಾಗಿ ಚರ್ಚಿಸಿದರು.
ಭಾರತ-ಆಸ್ಟ್ರೇಲಿಯಾ ನಡುವಿನ ಸಹಭಾಗಿತ್ವದ ಸಾಮರ್ಥ್ಯವನ್ನು ಅರಿತುಕೊಳ್ಳಲು ಉಭಯ ನಾಯಕರು ದ್ವಿಪಕ್ಷೀಯ ವ್ಯಾಪಾರ, ಹೂಡಿಕೆ ಮತ್ತು ಆರ್ಥಿಕ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಕುರಿತು ಚರ್ಚೆ ನಡೆಸಿದ್ದಾರೆ ಎಂದು ಪ್ರಧಾನಮಂತ್ರಿ ಕಾರ್ಯಾಲಯ ಬಿಡುಗಡೆ ಮಾಡಿದ ಹೇಳಿಕೆ ತಿಳಿಸಿದೆ.
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಆರ್ಥಿಕ ಸಹಕಾರವು ಎರಡೂ ದೇಶಗಳು ಕೋವಿಡ್ ಸಾಂಕ್ರಾಮಿಕದಿಂದ ಉಂಟಾಗುವ ಆರ್ಥಿಕ ಸವಾಲುಗಳನ್ನು ಉತ್ತಮವಾಗಿ ನಿಭಾಯಿಸಲು ಸಹಾಯ ಮಾಡುತ್ತದೆ ಎಂದು ಉಭಯ ದೇಶಗಳ ನಾಯಕರು ಒತ್ತಿ ಹೇಳಿದ್ದಾರೆ. ಇದರ ಜೊತೆಗೆ 'ಸ್ಥಿರ, ಸುರಕ್ಷಿತ ಮತ್ತು ಸಮೃದ್ಧ ಇಂಡೋ ಪೆಸಿಫಿಕ್ ಪ್ರದೇಶ' ಎಂಬ ದೃಷ್ಟಿಕೋನವನ್ನು ಅರಿತುಕೊಳ್ಳಲು ಸಹಾಯ ಮಾಡುತ್ತದೆ ಎಂದು ಇಬ್ಬರೂ ನಾಯಕರು ಅಭಿಪ್ರಾಯಪಟ್ಟಿದ್ದಾರೆ.
ಚರ್ಚೆಯ ವೇಳೆ ಭಾರತ-ಆಸ್ಟ್ರೇಲಿಯಾ ಬಾಂಧವ್ಯದ ಅದ್ಭುತ ಬೆಳವಣಿಗೆಗೆ ಪ್ರಧಾನಿ ಮೋದಿ ತೃಪ್ತಿ ವ್ಯಕ್ತಪಡಿಸಿದರು. ಎರಡು ರಾಷ್ಟ್ರಗಳ ಬಾಂಧವ್ಯಕ್ಕೆ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಮತ್ತು ಮಾಜಿ ಪ್ರಧಾನಿ ಅಬಾಟ್ ಕೊಡುಗೆಯನ್ನು ಮೋದಿ ಶ್ಲಾಘಿಸಿದರು.
ಕಳೆದ ವರ್ಷ ಜೂನ್ 4ರಂದು ಪ್ರಧಾನಿ ಮೋದಿ ಮತ್ತು ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ನಡುವೆ ನಡೆದ ನಾಯಕರ ವರ್ಚುವಲ್ ಶೃಂಗಸಭೆಯಲ್ಲಿ, ಎರಡು ದೇಶಗಳ ನಡುವೆ ಹೂಡಿಕೆಯನ್ನು ಉತ್ತೇಜಿಸಲು ನಿರ್ಧರಿಸಲಾಗಿದ್ದು, ಇದೇ ಕಾರ್ಯತಂತ್ರದ ಭಾಗವಾಗಿ ಟೋನಿ ಅಬ್ಬಾಟ್ ಭಾರತಕ್ಕೆ ಆಗಮಿಸಿದ್ದಾರೆ.
ಇದನ್ನೂ ಓದಿ: ಪ್ರಧಾನಿ ಮೋದಿ ಭೇಟಿಗೆ ಕೋರಿದ್ದೇನೆ, ಇದುವರೆಗೂ ಪ್ರತಿಕ್ರಿಯೆ ಬಂದಿಲ್ಲ: ನಿತೀಶ್ ಕುಮಾರ್