ಶಿಮ್ಲಾ/ ಬಾಲಿ( ಇಂಡೋನೇಷ್ಯಾ): ಬಾಲಿಯಲ್ಲಿ ನಡೆಯುತ್ತಿರುವ 'ಜಿ 20' ಶೃಂಗಸಭೆಯಲ್ಲಿ ಜಾಗತಿಕ ನಾಯಕರಿಗೆ ಪ್ರಧಾನಿ ಮೋದಿ, ಗುಜರಾತ್ ಮತ್ತು ಹಿಮಾಚಲ ಪ್ರದೇಶದ ಭವ್ಯ ಐತಿಹಾಸಿಕ, ಸಂಸ್ಕೃತಿ ಸಾರುವ ಕಲಾಕೃತಿಗಳನ್ನು ಉಡುಗೊರೆಯಾಗಿ ನೀಡಿ ಗಮನ ಸೆಳೆದಿದ್ದಾರೆ.
ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರಿಗೆ ಶೃಂಗಾರ ರಸದ ಕಾಂಗ್ರಾ ವರ್ಣರಂಜಿತ ಕಲಾಕೃತಿಯನ್ನು ಉಡುಗೊರೆಯಾಗಿ ನೀಡಿದರು. ಈ ಕಲಾಕೃತಿ ಪ್ರೀತಿ ಮತ್ತು ಅಧ್ಯಾತ್ಮಿಕತೆ ಒಳಗೊಂಡಿದ್ದು, ಪಹರಿ ಪೈಟಿಂಗ್ ಥೀಮ್ ಹೊಂದಿದೆ. ಕಾಂಗ್ರಾದ ಈ ವರ್ಣ ಕಲಾಕೃತಿಯಲ್ಲಿ ನೈಸರ್ಗಿಕ ಬಣ್ಣಗಳನ್ನು ಬಳಸಲಾಗುತ್ತದೆ.
ಸುನಕ್ಗೆ ಮಾತಾ ನಿ ಪಚೇಡಿ ಗಿಫ್ಟ್: ಇಂಗ್ಲೆಂಡ್ ಪ್ರಧಾನಿ ರಿಷಿ ಸುನಕ್ ಅವರಿಗೆ, ದೇಗುಲಗಳಲ್ಲಿ ದೇವತೆಗಳಿಗೆ ಅರ್ಪಿಸುವ 'ಮಾತಾ ನಿ ಪಚೇಡಿಯ' ಗುಜರಾತನ ಕೈಮಗ್ಗದ ಜವಳಿಯನ್ನು ಉಡುಗೊರೆಯಾಗಿ ನೀಡಿದರು ಎಂದು ಅಧಿಕೃತ ಮೂಲಗಳು ತಿಳಿಸಿವೆ. ಜಿ 20 ಶೃಂಗಸಭೆ ಆತಿಥ್ಯವಹಿಸಿದ ಇಂಡೋನೇಷ್ಯಾದ ಅಧ್ಯಕ್ಷರಾದ ಜೋಕೊ ವಿಡೋಡೊ ಅವರಿಗೆ ಹಿಮಾಚಲ ಪ್ರದೇಶದ ಕಿನ್ನೂರ್ನ ಕುಶಲಕರ್ಮಿಗಳಿಂದ ತಯಾರಿಸಲಾದ ಕಿನ್ನೌರಿ ಶಾಲು ಜೊತೆಗೆ ಸೂರತ್ನ ಬೆಳ್ಳಿ ಬಟ್ಟಲನ್ನು ಕಾಣಿಕೆಯಾಗಿ ನೀಡಿದರು.
ಸ್ಪೇನ್ ಪ್ರಧಾನಿಗೆ ಹಿಮಾಚಲ ಪ್ರದೇಶದ ಕುಲು ಮತ್ತು ಮಂಡಿಯಲ್ಲಿ ಬಳಕೆ ಮಾಡುವ ಕನಾಲ್ ಕಂಚಿನ ಬಟ್ಟಲಿನ ಸೆಟ್ನ್ನು ಉಡುಗೊರೆಯಾಗಿ ನೀಡಿದರು. ಆಸ್ಟ್ರೇಲಿಯಾ ಪ್ರಧಾನಿ ಅಂಥೋನಿ ಅಲ್ಬೆನೀಸ್ ಅವರಿಗೆ ಗುಜರಾತ್ನ ಛೋಟಾ ಉದಯಪುರದ ರಥವಾ ಕಲಾಕಾರರ ಕೈಚಳಕದಲ್ಲಿ ಅರಳಿದ ಬುಡಕಟ್ಟು ಜನಪದದ ಪಿತೋರ್ ಅನ್ನು ನೀಡಿದರು.
ಎರಡೂ ರಾಜ್ಯಗಳ ಚುನಾವಣೆ ಹಿನ್ನೆಲೆ ಭಾರಿ ಮಹತ್ವ: ಗುಜರಾತ್ ಮತ್ತು ಹಿಮಾಚಲ ಪ್ರದೇಶ ಚುನಾವಣೆ ಹಿನ್ನೆಲೆಯಲ್ಲಿ ಈ ಪ್ರದೇಶಗಳ ಸಂಪ್ರಾದಾಯಿಕ ಕಲಾಕೃತಿಗಳನ್ನು ಉಡುಗೊರೆಯಾಗಿ ನೀಡುವತ್ತ ಪ್ರಧಾನಿಗಳು ಹೆಚ್ಚಿನ ಗಮನಹರಿಸಿರುವುದನ್ನು ಕಾಣಬಹುದಾಗಿದೆ. ನ. 12ರಿಂದ ಹಿಮಾಚಲ ಪ್ರದೇಶ ಚುನಾವಣೆ ನಡೆಯಲಿದ್ದು, ಡಿಸೆಂಬರ್ 1 ಮತ್ತು 5ರಂದು ಗುಜರಾತ್ನಲ್ಲಿ ಸಾರ್ವತ್ರಿಕ ಚುನಾವಣಾ ಮತದಾನ ನಡೆಯಲಿದೆ.
ಇದನ್ನೂ ಓದಿ: ಭಾರತಕ್ಕೆ ಜಿ20 ಅಧ್ಯಕ್ಷ ಸ್ಥಾನ ಹಸ್ತಾಂತರಿಸಿದ ಇಂಡೋನೇಷ್ಯಾ: ಒಂದೇ ಭೂಮಿ, ಕುಟುಂಬ, ಭವಿಷ್ಯದ ಪರಿಕಲ್ಪನೆ ನೀಡಿದ ಮೋದಿ