ಲಖನೌ(ಉತ್ತರ ಪ್ರದೇಶ): ಇಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಉತ್ತರ ಪ್ರದೇಶದ ಮಹಾರಾಜ ಸುಹೆಲ್ದೇವ್ ಸ್ಮಾರಕಕ್ಕೆ ಅಡಿಪಾಯ ಹಾಕಿದ ಪ್ರಧಾನಿ ನರೇಂದ್ರ ಮೋದಿ, ಚಿತ್ತೌರಾ ಸರೋವರದ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಪಿಎಂ ಮೋದಿ, ಭಾರತದ ಇತಿಹಾಸ ಎಂದರೆ ಅದು ಕೇವಲ ಈ ದೇಶವನ್ನ ಗುಲಾಮಗಿರಿಗೆ ತಳ್ಳಿದವರು, ಗಲಾಮಗಿರಿಯ ಮನಸ್ಥಿತಿ ಹೊಂದಿದವರು ಬರೆದದ್ದಲ್ಲ. ಭಾರತದ ಇತಿಹಾಸವನ್ನು ದೇಶದ ಜನರು ಜಾನಪದ ಕಥೆಗಳಲ್ಲಿ ಇಟ್ಟುಕೊಂಡಿದ್ದಾರೆ, ಇದು ಪೀಳಿಗೆಯಿಂದ ಪೀಳಿಗೆಗೆ ಸಾಗಿಸುತ್ತಾ ಬರಲಾಗಿದೆ ಎಂದು ಹೇಳಿದರು.
ಭಾರತವು ಸ್ವಾತಂತ್ರ್ಯದ 75ನೇ ವರ್ಷಕ್ಕೆ ಕಾಲಿಡುತ್ತಿರುವಾಗ, ಮಹಾರಾಜ ಸುಹೆಲ್ದೇವ್ರಂತಹ ಅಂತಹ ಮಹಾನ್ ವ್ಯಕ್ತಿಗಳ ಕೊಡುಗೆ, ತ್ಯಾಗ, ಹೋರಾಟ, ಶೌರ್ಯ ಸ್ಮರಿಸುವ ಮತ್ತು ಅದರಿಂದ ಸ್ಫೂರ್ತಿ ಪಡೆಯುವುದಕ್ಕಿಂತ ದೊಡ್ಡ ಸಮಾರಂಭ ಇನ್ನೊಂದಿಲ್ಲ. ಭಾರತವನ್ನು ರಕ್ಷಿಸಲು ತಮ್ಮ ಜೀವನವನ್ನು ಮುಡಿಪಾಗಿಟ್ಟವರಿಗೆ ಸರಿಯಾದ ಸ್ಥಾನಮಾನವನ್ನು ನೀಡಲಾಗಿಲ್ಲ. ಇತಿಹಾಸವನ್ನು ರಚಿಸಿದವರಿಗೆ ಇತಿಹಾಸವನ್ನು ಬರೆದವರಿಂದ ಅನ್ಯಾಯವಾಗಿದೆ ಎಂದು ಪ್ರಧಾನಿ ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ: ಜಮ್ಮು- ಕಾಶ್ಮೀರದಲ್ಲಿ ಉಗ್ರರಿಂದ ಐಇಡಿ ಸ್ಫೋಟ
1033ನೇ ಇಸವಿಯಲ್ಲಿ ಚಿತ್ತೌರಾ ಸರೋವರ ತೀರದಲ್ಲಿ ನಡೆದ ಯುದ್ಧದಲ್ಲಿ ರಾಜ್‌ಭರ್ ಸಮುದಾಯದ ಐಕಾನ್ ಆಗಿದ್ದ ಮಹಾರಾಜ ಸುಹೆಲ್ದೇವ್ ಅವರು ಘಜ್ನವಿಡ್ ಸಾಮ್ರಾಜ್ಯದ ಘಾಜಿ ಸೈಯ್ಯದ್ ಸಲಾರ್ ಮಸೂದ್ರನ್ನು ಸೋಲಿಸಿ ಕೊಂದಿದ್ದರು.
ಸುಹೆಲ್ದೇವ್ ನೆನಪಿಗಾಗಿ ಸ್ಮಾರಕ ನಿರ್ಮಿಸಲಾಗುತ್ತಿದ್ದು, ಇಂದು ಮೋದಿ ಅಡಿಪಾಯ ಹಾಕಿದ್ದಾರೆ. ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿ ಹಲವರು ಉಪಸ್ಥಿತರಿದ್ದರು.