ಉತ್ತರಪ್ರದೇಶ : ಅಲಿಘರ್ನ ಧನಿಪುರ ಮಿನಿ ವಿಮಾನ ನಿಲ್ದಾಣದಲ್ಲಿ ಭಾನುವಾರ ಲ್ಯಾಂಡಿಂಗ್ ವೇಳೆ ತರಬೇತಿ ವಿಮಾನವೊಂದು ಅಪಘಾತಕ್ಕೀಡಾಗಿದೆ. ತರಬೇತುದಾರರು ಮತ್ತು ತರಬೇತಿ ಪಡೆಯುತ್ತಿದ್ದವರು ವಿಮಾನದಲ್ಲಿದ್ದರು. ಘಟನೆಯಲ್ಲಿ ಯಾರಿಗೂ ಅಪಾಯ ಸಂಭವಿಸಿಲ್ಲ.
ವಿಮಾನದಲ್ಲಿ ಪೈಲಟ್ ಪ್ರಶಾಂತ್ ಗೋಸ್ವಾಮಿ ಮತ್ತು ತರಬೇತಿ ನೀಡುವ ಪೈಲಟ್ ಇದ್ದರು. ಸ್ಥಳೀಯ ಹಾರಾಟದ ನಂತರ ವಿಮಾನವು ಎಎಫ್-ಆರ್ ರನ್‌ವೇಗೆ ಇಳಿಯುತ್ತಿತ್ತು. ಈ ವೇಳೆ ವಿಮಾನದ ಚಕ್ರಗಳು ರನ್ವೇಯಿಂದ ಕೆಳಗಿಳಿದವು. ತಕ್ಷಣವೇ ಪೈಲಟ್ ಮತ್ತು ಟ್ರೈನಿ ಪೈಲಟ್ ವಿಮಾನದಿಂದ ಹಾರಿ ತಮ್ಮ ಪ್ರಾಣ ಉಳಿಸಿಕೊಂಡರು.
ಈ ಘಟನೆ ಬಳಿಕ ಧನಿಪುರ ಏರ್‌ಸ್ಟ್ರಿಪ್‌ನಲ್ಲಿ ವಿಮಾನ ಹಾರಾಟ ಮತ್ತು ಇಳಿಯುವುದನ್ನು ನಿಷೇಧಿಸಲಾಗಿದೆ. ಇನ್ನು, ಘಟನೆಯ ತನಿಖೆಗಾಗಿ ನಾಗರಿಕ ವಿಮಾನಯಾನ ತನಿಖಾ ತಂಡ ಸೋಮವಾರ ದೆಹಲಿಯಿಂದ ಆಗಮಿಸಿದೆ.
ಧನಿಪುರ ವಾಯುನೆಲೆಯಲ್ಲಿ ಈ ರೀತಿ ವಿಮಾನ ಅಪಘಾತ ಇದೇ ಮೊದಲಲ್ಲ. ಎರಡು ವರ್ಷಗಳ ಹಿಂದೆ, ಚಾರ್ಟರ್ಡ್ ವಿಮಾನವು ಲ್ಯಾಂಡಿಗ್ ವೇಳೆ ಅಪಘಾತಕ್ಕೀಡಾಗಿತ್ತು. ಆದರೆ, ಯಾವುದೇ ಪ್ರಾಣಹಾನಿ ಸಂಭವಿಸಿರಲಿಲ್ಲ. ಬೆಂಕಿಯಿಂದ ವಿಮಾನ ಸಂಪೂರ್ಣ ಸುಟ್ಟುಹೋಗಿತ್ತು.