ಶಹಜಹಾನ್‌ಪುರ: ಉತ್ತರ ಪ್ರದೇಶದಲ್ಲಿ 21 ವರ್ಷದ ಪಿಜ್ಜಾ ಡೆಲಿವರಿ ಮಾಡುವ ವ್ಯಕ್ತಿಯೊಬ್ಬ ಹರಿದ 200 ರೂಪಾಯಿ ನೋಟನ್ನು ತೆಗೆದುಕೊಳ್ಳಲು ನಿರಾಕರಿಸಿದ್ದರಿಂದ ದುರುಳರಿಬ್ಬರು ಆತನ ಮೇಲೆ ಗುಂಡು ಹಾರಿಸಿದ್ದಾರೆ. ಘಟನೆ ಬುಧವಾರ ರಾತ್ರಿ ನಡೆದಿದ್ದು ಇಂದು ಬೆಳಕಿಗೆ ಬಂದಿದೆ.
ಸಚಿನ್ ಕಶ್ಯಪ್ ಗಾಯಗೊಂಡ ವ್ಯಕ್ತಿ. ತಕ್ಷಣ ಆತನನ್ನು ಇಲ್ಲಿನ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಬರೇಲಿಯ ವಿಶೇಷ ವೈದ್ಯಕೀಯ ಕೇಂದ್ರಕ್ಕೆ ಕರೆದೊಯ್ಯಲಾಗಿದೆ. ಸದ್ಯ ಆತನ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.
ಗುಂಡು ಹಾರಿಸಿದ ನದೀಮ್ ಖಾನ್ (27) ಮತ್ತು ಅವರ ಸಹೋದರ ನಯೀಮ್ (29) ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಸದರ್ ಬಜಾರ್ ಠಾಣೆಯ ಹೌಸ್ ಆಫೀಸರ್ (ಎಸ್‌ಎಚ್‌ಒ) ಅಮಿತ್ ಪಾಂಡೆ ತಿಳಿಸಿದ್ದಾರೆ. ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ದೇಶಿ ನಿರ್ಮಿತ ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದೆ.
ಮತ್ತಷ್ಟು ವಿವರ: ಬುಧವಾರ ರಾತ್ರಿ 11 ಗಂಟೆಗೆ ನದೀಮ್ ಫೋನ್ ಮೂಲಕ ಪಿಜ್ಜಾ ಆರ್ಡರ್ ಮಾಡಿದ್ದ. ರಾತ್ರಿ 11.30ರ ಸುಮಾರಿಗೆ ಸಚಿನ್ ಮತ್ತು ಆತನ ಸಹೋದ್ಯೋಗಿ ರಿತಿಕ್ ಕುಮಾರ್ ಪಿಜ್ಜಾವನ್ನು ತಲುಪಿಸಿ ಹಣ ಪಡೆದು ತೆರಳಿದ್ದರು. ದಾರಿ ಮಧ್ಯೆ ಅವರು ನೀಡಿದ ಹಣದಿಂದ ಸಚಿನ್ ತಂಪು ಪಾನೀಯ ಖರೀದಿಸಲು ತೆರಳಿದ್ದರು. ಆಗ ನದೀಮ್ ನೀಡಿದ್ದ 200 ರೂ. ನೋಟು ಹರಿದಿರುವುದು ಗೊತ್ತಾಗಿದೆ. ಅಂಗಡಿಯವನು ಅದನ್ನು ಸ್ವೀಕರಿಸಲು ನಿರಾಕರಿಸಿದ್ದರಿಂದ ಇಬ್ಬರೂ ತಕ್ಷಣ ಹಿಂತಿರುಗಿ ನದೀಮ್‌ನ ಬಾಗಿಲು ಬಡಿದು, ನೋಟು ಬದಲಿಸುವಂತೆ ಮನವಿ ಮಾಡಿದ್ದರು.
ಆದರೆ, ನದೀಮ್ ಕೋಪದಿಂದ ಅವರ ಮೇಲೆ ಹಲ್ಲೆ ಮಾಡಿದ್ದಾನೆ. ಜಗಳದ ಸುದ್ದಿ ಗೊತ್ತಾಗುತ್ತಿದ್ದಂತೆ ಹೊರಬಂದ ಆತನ ಸಹೋದರ ನಯೀಮ್, ಡೆಲಿವರಿ ಬಾಯ್ ಸಚಿನ್ ಮೇಲೆ ಕಂಟ್ರಿಮೇಡ್ ಪಿಸ್ತೂಲ್‌ನಿಂದ ಗುಂಡು ಹಾರಿಸಿದ್ದಾನೆ. ಗುಂಡಿನ ಸದ್ದು ಕೇಳಿದ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಮಗಳ ಜನ್ಮದಿನದಂದೇ ನಡೀತು ದುರಂತ.. ಒಂದೇ ಕುಟುಂಬದ ಆರು ಜನರ ಶವ ಪತ್ತೆ