ನವದೆಹಲಿ: 2000 ರೂಪಾಯಿ ಮುಖಬೆಲೆಯ ನೋಟುಗಳನ್ನು ಹಂತ ಹಂತವಾಗಿ ರದ್ದುಗೊಳಿಸಬೇಕು ಎಂದು ಬಿಜೆಪಿ ಸಂಸದ ಸುಶೀಲ್ ಕುಮಾರ್ ಮೋದಿ ರಾಜ್ಯಸಭೆಯಲ್ಲಿ ಒತ್ತಾಯಿಸಿದ್ದಾರೆ. ಅಲ್ಲದೇ, 2000 ರೂ ಮುಖಬೆಲೆ ಹೊಂದಿರುವವರಿಗೆ ಅದನ್ನು ಬ್ಯಾಂಕ್ನಲ್ಲಿ ವಿನಿಮಯ ಮಾಡಿಕೊಳ್ಳಲು ಎರಡು ವರ್ಷ ಸಮಯ ನೀಡಬೇಕು ಎಂದಿದ್ದಾರೆ.
ಶೂನ್ಯವೇಳೆಯಲ್ಲಿ ಈ ಕುರಿತು ಮಾತನಾಡಿದ ಅವರು, ಎಟಿಎಂಗಳಲ್ಲಿ 2000 ರೂ ಮುಖ ಬೆಲೆಯ ನೋಟುಗಳು ಸಂಪೂರ್ಣವಾಗಿ ಕಣ್ಮರೆಯಾಗಿವೆ. ಅಲ್ಲದೇ, ಅವು ಚಲಾವಣೆಯಲ್ಲಿ ಇಲ್ಲ ಎಂಬ ಗಾಳಿ ಸುದ್ದಿ ಸಹ ಹರಿದಾಡುತ್ತಿದೆ. ಈ ಸಂಬಂಧ ಸರ್ಕಾರ ಸ್ಪಷ್ಟಪಡಿಸಬೇಕಿದೆ. ಆರ್ಬಿಐ ಕೂಡ ಕಳೆದ ಮೂರು ವರ್ಷಗಳ ಹಿಂದೆಯೇ 2000 ಮುಖ ಬೆಲೆ ನೋಟು ಮುದ್ರಣವನ್ನು ನಿಲ್ಲಿಸಿದೆ ಎಂದರು.
500 ಮತ್ತ 1000 ರೂಪಾಯಿ ನೋಟು ಅಮಾನ್ಯೀಕರಣದ ಬಳಿಕ ಹೊಸ 500 ಮತ್ತು 2000 ರೂ ಮುಖ ಬೆಲೆಯ ನೋಟನ್ನು ಪರಿಚಯಿಸಲಾಯಿತು. 1000 ರೂ ನೋಟು ಚಲಾವಣೆಯಲ್ಲಿದ್ದಾಗ 2000 ನೋಟು ಚಾಲನೆಗೆ ತಂದಿದ್ದರ ಹಿಂದೆ ಯಾವುದೇ ತರ್ಕ ಇಲ್ಲ. 2000 ರೂ ನೋಟುಗಳು ಡ್ರಗ್, ಮನಿ ಲಾಂಡ್ರಿಂಗ್ನಂತಹ ಅಕ್ರಮವಾದ ವ್ಯಾಪಾರದಲ್ಲಿ ಬಳಕೆಯಾಯಿತು.
ದೇಶದಲ್ಲಿ ಅತಿಹೆಚ್ಚು ಮುಖ ಬೆಲೆಯ ನೋಟು 2000 ರೂ ಆಗಿದ್ದು, ಕಪ್ಪು ಹಣಕ್ಕೆ ಇದು ಸಮಾನವಾಗಿದೆ. ಸರ್ಕಾರ ಕ್ರಮೇಣವಾಗಿ ಈ 2000 ರೂ ಮುಖಬೆಲೆ ನೋಟನ್ನು ಹಿಂಪಡೆಯಬೇಕು. ಇದರ ಬದಲಾವಣೆಗೆ ನಾಗರಿಕರಿಗೆ ಎರಡು ವರ್ಷ ಸಮಯ ನೀಡಬೇಕು ಎಂದು ಹೇಳಿದರು.
ಇನ್ನು, ಕಳೆದ ಫೆಬ್ರವರಿಯಲ್ಲಿ ಈ ಕುರಿತು ಮಾತನಾಡಿದ್ದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಬ್ಯಾಂಕ್ಗಳಿಗೆ 2000 ರೂ ನೋಟಿನ ವಹಿವಾಟು ನಡೆಸದಂತೆ ಅಥವಾ ಮುದ್ರಣ ನಿಲ್ಲಿಸುವಂತೆ ಯಾವುದೇ ಸೂಚನೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದರು.
ಇದನ್ನೂ ಓದಿ: 2000 ರೂ. ನೋಟು ಮುದ್ರಣ ಸ್ಥಗಿತಗೊಳಿಸಲ್ಲ.. ಸಚಿವ ಅನುರಾಗ್ ಠಾಗೂರ್ ಸ್ಪಷ್ಟನೆ