ಅನ್ಸ್ವಾರಾ (ರಾಜಸ್ಥಾನ): ತಾನು ಸಾಕಿದ್ದ ಮುಳ್ಳು ಇಲಿಯನ್ನು ಸಹೋದರನ ಪುತ್ರರು ಕದ್ದಿದ್ದಾರೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ. ಇದರ ಆಧಾರದ ಮೇಲೆ ಎಫ್ಐಆರ್ ದಾಖಲಿಸಿಕೊಂಡ ಪೊಲೀಸರು, ಮೂವರು ಆರೋಪಿಗಳನ್ನು ವಿಚಾರಣೆಗೂ ಕರೆದಿದ್ದಾರೆ.
ರಾಜಸ್ಥಾನದ ಬನ್ಸ್ವಾರಾ ಜಿಲ್ಲೆಯ ಸಜ್ಜನ್ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಪಡ್ಲಾ ವಡ್ಖಿಯಾ ಗ್ರಾಮದಲ್ಲಿ ಈ ವಿಲಕ್ಷಣ ಘಟನೆ ನಡೆದಿದೆ. ಕಳೆದ ಬುಧವಾರ ಬೆಳಗಿನ ಜಾವ 2 ಗಂಟೆಗೆ ನನ್ನ ಸಹೋದರನ ಮಕ್ಕಳಾದ ಸುರೇಶ್, ಮೋಹಿತ್ ಮತ್ತು ಅರವಿಂದ್ ಎಂಬುವರು ಇಲಿಯನ್ನು ಕದ್ದಿದ್ದಾರೆ ಎಂದು ಇಲಿಯ ಮಾಲೀಕ, 62 ವರ್ಷದ ಮಂಗು ಆರೋಪಿಸಿದ್ದಾರೆ.
ಮಂಗು ಮನೆಯಲ್ಲಿ ಇಲಿಯನ್ನು ಕುಟುಂಬದ ಸದಸ್ಯ ಎಂದೇ ಪರಿಗಣಿಸಿದ್ದರು. ಇಲಿಯನ್ನು ಕದ್ದೊಯ್ದ ನಂತರ ಹಿಂತಿರುಗಿಸುವಂತೆ ಕೇಳಿದ್ದರು. ಆದರೆ, ಅದನ್ನು ಮರಳಿ ನೀಡಲು ನಿರಾಕರಿಸಿದ್ದಾರೆ. ಆದ್ದರಿಂದ ಠಾಣೆಗೆ ಮಂಗು ದೂರು ದಾಖಲಿಸಿದ್ದಾರೆ. ಈ ದೂರಿನ ಐಪಿಸಿ ಸೆಕ್ಷನ್ 457 ಮತ್ತು 380 ರಡಿಯಲ್ಲಿ ಕಳ್ಳತನದ ಪ್ರಕರಣವನ್ನು ದಾಖಲಿಸಲಾಗಿದೆ. ಜೊತೆಗೆ ಮೂವರು ಆರೋಪಿಗಳನ್ನು ವಿಚಾರಣೆಗೆ ಕರೆಯಲಾಗಿದೆ ಎಂದು ಸಜ್ಜನ್ಗಢ ಎಸ್‌ಎಚ್‌ಒ ಧನಪತ್ ಸಿಂಗ್ ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿರುವ ಮಂಗು ಅವರ ಮಗ ಜೀವಾಳ, ನಮ್ಮ ಚಿಕ್ಕಪ್ಪನ ಮಕ್ಕಳು ಇಲಿ ಬೇಕೆಂದರೆ ಕೇಳಿ ತೆಗೆದುಕೊಂಡು ಹೋಗಬಹುದಿತ್ತು. ಆದರೆ, ಆ ಇಲಿಯನ್ನು ಪಡೆಯಲು ಅವರು ಕಳ್ಳತನದ ದಾರಿ ಹುಡುಕಿದ್ದಾರೆ. ಹೀಗಾಗಿ ಆರೋಪಿಗಳಿಗೆ ಶಿಕ್ಷೆಯಾಗಬೇಕೆಂದು ಹೇಳಿದ್ದಾರೆ.
ಇದನ್ನೂ ಓದಿ: ಟೇಬಲ್ ಫ್ಯಾನ್ ಕದ್ದೊಯ್ದ ಪೊಲೀಸರು: ಸಿಸಿಟಿವಿ ಸಾಕ್ಷ್ಯ ಸಮೇತ ಠಾಣೆಗೆ ಹೋದ ಮನೆ ಮಾಲೀಕ!