ಗಾಜಿಯಾಬಾದ್ (ನವದೆಹಲಿ) : ರಸ್ತೆಯಲ್ಲಿ ನಿಂತಿದ್ದ ಇಬ್ಬರು ಮಕ್ಕಳ ಮೇಲೆ ಸಾಕು ನಾಯಿಯೊಂದು ದಾಳಿ ಮಾಡಿದೆ. ಅಕ್ಕ ಪಕ್ಕದಲ್ಲಿದ್ದ ಸಾರ್ವಜನಿಕರು ಕೂಡಲೇ ಸ್ಥಳಕ್ಕಾಗಮಿಸಿ ಮಕ್ಕಳನ್ನು ರಕ್ಷಣೆ ಮಾಡಿರುವ ವಿಡಿಯೋವೊಂದು ವೈರಲ್ ಆಗಿದೆ.
ಇಲ್ಲಿನ ರಾಜ್ನಗರ್ ಎಕ್ಸ್ಟೆನ್ಷನ್ ರಸ್ತೆಯಲ್ಲಿ ನಿಂತಿದ್ದ ಮಕ್ಕಳಿಬ್ಬರ ಮೇಲೆ ನಾಯಿ ಏಕಾಏಕಿ ದಾಳಿ ಮಾಡಿದೆ. ಈ ವೇಳೆ ನೆಲಕ್ಕುರುಳಿದ ಮಕ್ಕಳನ್ನು ಮನಬಂದಂತೆ ಕಚ್ಚಿದೆ. ನಾಯಿಯಿಂದ ತಪ್ಪಿಸಿಕೊಳ್ಳಲು ಅವರು ಪ್ರಯತ್ನಿಸಿದರಾದರೂ, ಭಯಭೀತರಾಗಿ ಅಲ್ಲೇ ಬಿದ್ದಿದ್ದಾರೆ. ಇದನ್ನು ಕಂಡ ಸೆಕ್ಯುರಿಟಿ ಗಾರ್ಡ್ಸ್ ಸ್ಥಳಕ್ಕೆ ದೌಡಾಯಿಸಿ ನಾಯಿಯನ್ನು ದೊಣ್ಣೆಯಿಂದ ಹೊಡೆದು ಓಡಿಸಿದ್ದಾರೆ.
ಇಬ್ಬರು ಮಕ್ಕಳಲ್ಲಿ ಒಬ್ಬರಿಗೆ ತೊಡೆ ಹಾಗು ಬೆನ್ನು ಭಾಗದಲ್ಲಿ ತೀವ್ರ ಗಾಯಗಳಾಗಿವೆ. ಈ ಸಂಬಂಧ ಇಲ್ಲಿನ ಸ್ಥಳೀಯರೊಬ್ಬರು, ಇದು ಸಾಕು ನಾಯಿ ಇದನ್ನು ಹೊರಗಡೆ ಬಿಟ್ಟು ಘಟನೆಗೆ ಕಾರಣರಾದವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಹಾಗೂ ಆ ಕುಟುಂಬ ಬೇರೆಡೆಗೆ ಸ್ಥಳಾಂತರವಾಗಬೇಕು ಎಂದು ಪೊಲೀಸರಿಗೆ ದೂರು ನೀಡಿ ಒತ್ತಾಯಿಸಿದ್ದಾರೆ.