ರಾಮ್‌ಪುರಹತ್ (ಪಶ್ಚಿಮ ಬಂಗಾಳ): ಹೌರಾ-ಮಾಲ್ಡಾ ಇಂಟರ್‌ಸಿಟಿ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಕನೊಬ್ಬ ವ್ಯಕ್ತಿಯೊಬ್ಬನನ್ನು ಚಲಿಸುತ್ತಿರುವ ರೈಲಿನಿಂದ ಕೆಳಗೆ ತಳ್ಳಿ, ನಂತರ ನಿರಾತಂಕವಾಗಿ ಪ್ರಾರ್ಥನೆ ಮಾಡಿ ತನ್ನ ಸ್ಥಾನಕ್ಕೆ ಹಿಂತಿರುಗಿ ಬಂದು ಕೂತಿರುವ ಆಘಾತಕಾರಿ ಘಟನೆ ಶನಿವಾರ ರಾತ್ರಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಹಾಗೂ ಕೆಳಗೆ ತಳ್ಳಲ್ಪಟ್ಟ ವ್ಯಕ್ತಿಯ ನಡುವೆ ಮಲ್ಲಾರ್ಪುರ ನಿಲ್ದಾಣದಲ್ಲೇ ವಾಗ್ವಾದ ಪ್ರಾರಂಭವಾಗಿದ್ದು, ಮಾತು ಜಗಳಕ್ಕೆ ತಿರುಗಿದೆ. ರೈಲಿನಲ್ಲಿದ್ದ ವಿಶೇಷ ಚೇತನರೊಬ್ಬರು ಇವರಿಬ್ಬರ ನಡುವೆ ನಡೆದ ಜಗಳವನ್ನು ವಿಡಿಯೋ ಮಾಡಿದ್ದಾರೆ. ವಿಡಿಯೋದಲ್ಲಿ ಇಬ್ಬರೂ ಪರಸ್ಪರ ತಳ್ಳುತ್ತಿರುವುದು. ಹಾಗೂ ಇದ್ದಕ್ಕಿದ್ದಂತೆ ಆರೋಪಿ ವ್ಯಕ್ತಿಯನ್ನು ರೈಲಿನಿಂದ ಕೆಳಗೆ ತಳ್ಳಿರುವುದು ರೆಕಾರ್ಡ್ ಆಗಿದೆ. ತಾರಾಪಿತ್ ರಸ್ತೆ ಮತ್ತು ರೂಂಪುರಹತ್ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ರೈಲು ಪ್ರಸಿದ್ಧ ಕಾಳಿ ದೇವಸ್ಥಾನವಿರುವ ತಾರಾಪೀಠದ ಬಳಿ ಬರುತ್ತಿದ್ದಂತೆ, ಆರೋಪಿ ಶಾಂತವಾಗಿ ಪ್ರಾರ್ಥನೆ ಸಲ್ಲಿಸಿ ತನ್ನ ಸ್ಥಾನಕ್ಕೆ ಹಿಂತಿರುಗಿದ್ದಾನೆ. ವಿಶೇಷಚೇತನ ವ್ಯಕ್ತಿ ರೈಲಿನಿಂದ ಇಳಿದು ಘಟನೆಯ ಕುರಿತು ಮುರಾರೈ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಗಾಯಗೊಂಡ ಪ್ರಯಾಣಿಕನನ್ನು ರಾಂಪುರಹತ್‌ನ ಸಂಧಿಪುರ ಪ್ರದೇಶದ ನಿವಾಸಿ ಸಜಲ್ ಶೇಖ್ (25) ಎಂದು ಗುರುತಿಸಲಾಗಿದೆ. ಹಳಿಯಲ್ಲಿ ಗಂಭೀರ ಸ್ಥಿತಿಯಲ್ಲಿ ಬಿದ್ದಿದ್ದ ಸಜಲ್ ಅವರನ್ನು ರಕ್ಷಿಸಲಾಯಿತು. ರಾಂಪುರಹತ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿದೆ. ಆರೋಪಿ ಪತ್ತೆಗೆ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ.
ಇದನ್ನೂ ಓದಿ: ದಾವಣಗೆರೆ: ಬಿಜೆಪಿಗರಿಂದಲೇ ಶಾಸಕ ರೇಣುಕಾಚಾರ್ಯರ ಪಿಎ ಮೇಲೆ ಹಲ್ಲೆ?