ಶಿಲ್ಲಾಂಗ್ (ಮೇಘಾಲಯ): ಮೇಘಾಲಯದಲ್ಲಿ ತಿಂಗಳಾಂತ್ಯಕ್ಕೆ ವಿಧಾನಸಭೆ ಚುನಾವಣೆ ನಡೆಯಲಿದೆ. ಇಲ್ಲಿನ ಕ್ರೀಡಾಂಗಣದಲ್ಲಿ ಬಿಜೆಪಿ ನಡೆಸಲು ಉದ್ದೇಶಿಸಿದ್ದ ಸಮಾವೇಶಕ್ಕೆ ಸರ್ಕಾರ ಅನುಮತಿ ನಿರಾಕರಿಸಿದೆ. ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುವ ಸಮಾವೇಶಕ್ಕೆ ಅನುಮತಿ ನೀಡದೇ ಇರುವುದನ್ನು ಬಿಜೆಪಿ ಕಟುವಾಗಿ ಟೀಕಿಸಿದೆ. ಚುನಾವಣೆಯಲ್ಲಿ ಬಿಜೆಪಿ ವಿಕ್ರಮ ಸಾಧಿಸುವ ಭಯದಿಂದಾಗಿ ಸರ್ಕಾರ ಈ ರೀತಿ ಮಾಡಿದೆ ಎಂದು ಕಿಡಿಕಾರಿದೆ.
ಫೆ.24 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಅವರ ತವರು ಕ್ಷೇತ್ರ ದಕ್ಷಿಣ ತುರಾದ ಪಿಎ ಸಂಗ್ಮಾ ಕ್ರೀಡಾಂಗಣದಲ್ಲಿ ಸಮಾವೇಶ ನಡೆಸಲು ನಿರ್ಧರಿಸಿದ್ದರು. ಆದರೆ, ರಾಜ್ಯ ಕ್ರೀಡಾ ಇಲಾಖೆ ಸಮಾವೇಶಕ್ಕೆ ಅನುಮತಿ ನೀಡಿಲ್ಲ. ನೂತನ ಕ್ರೀಡಾಂಗಣದಲ್ಲಿ ಒಂದಷ್ಟು ಕಾಮಗಾರಿ ಕೆಲಸಗಳು ನಡೆಯುತ್ತಿವೆ. ಹೀಗಾಗಿ ಅಲ್ಲಿ ಕಾರ್ಯಕ್ರಮಕ್ಕೆ ಅವಕಾಶ ನೀಡಲಾಗದು ಎಂದು ಸರ್ಕಾರ ಹೇಳಿದೆ. ಇದು ರಾಜಕೀಯ ಕಿತ್ತಾಟಕ್ಕೆ ನಾಂದಿ ಹಾಡಿದೆ.
ಪಿಎ ಸಂಗ್ಮಾ ಕ್ರೀಡಾಂಗಣದಲ್ಲಿ ದೊಡ್ಡ ಸಮಾವೇಶ ನಡೆಸುವುದು ಸೂಕ್ತವಲ್ಲ. ಕ್ರೀಡಾಂಗಣದಲ್ಲಿ ಕೆಲ ಕಾಮಗಾರಿಗಳು ನಡೆಯುತ್ತಿವೆ. ಮೈದಾನದಲ್ಲಿ ನಿರ್ಮಾಣಕ್ಕೆ ಸಂಬಂಧಿಸಿದ ವಸ್ತುಗಳನ್ನು ಸಂಗ್ರಹಿಸಲಾಗಿದೆ. ಹೀಗಾಗಿ ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಅನುಮತಿ ನೀಡಲಾಗಿಲ್ಲ. ಇದಕ್ಕೆ ಪರ್ಯಾಯವಾಗಿ ಇನ್ನೊಂದು ಕ್ರಿಕೆಟ್ ಕ್ರೀಡಾಂಗಣದಲ್ಲಿ ಸಮಾವೇಶ ನಡೆಸುವ ಕುರಿತಾಗಿ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
'ಸೋಲಿನ ಭಯ': ಪ್ರಧಾನಿ ಸಭೆಗೆ ಅನುಮತಿ ನಿರಾಕರಿಸಿದ್ದನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ. ಕ್ರೀಡಾಂಗಣ ಉದ್ಘಾಟನೆಯಾಗಿ 2 ತಿಂಗಳು ಕಳೆದಿದೆ. ಪೂರ್ಣವಾಗಿ ಕಾಮಗಾರಿ ಮುಗಿದಿಲ್ಲ ಎಂದು ಸಬೂಬು ಹೇಳಲಾಗ್ತಿದೆ. ಸಿಎಂ ತವರಿನಲ್ಲಿ ಸಮಾವೇಶ ನಡೆಸುತ್ತಿರುವುದಕ್ಕೆ ಕಾನ್ರಾಡ್ ಸಂಗ್ಮಾ ಮತ್ತು ಮುಕುಲ್ ಸಂಗ್ಮಾ ಅವರು ಹೆದರಿದ್ದಾರೆ. ರಾಜ್ಯದಲ್ಲಿ ಬಿಜೆಪಿಯ ಗೆಲುವಿಗೆ ತಡೆ ಒಡ್ಡಲು ಯತ್ನಿಸುತ್ತಿದ್ದಾರೆ ಎಂದೆಲ್ಲಾ ಆರೋಪಿಸಿದೆ.
ಪ್ರಧಾನಿಗಳ ಸಮಾವೇಶವನ್ನು ತಡೆಯಲು ಪ್ರಯತ್ನಿಸಬಹುದು. ಆದರೆ, ಮೇಘಾಲಯದಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿ, ಸರ್ಕಾರ ರಚಿಸಲಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಇತರ ಬಿಜೆಪಿ ನಾಯಕರ ರ್ಯಾಲಿಗಳಿಗೆ ಜನರಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ಇದು ಆಡಳಿತ ಪಕ್ಷ ಸೇರಿದಂತೆ ಇತರೆ ಪಕ್ಷಗಳಿಗೆ ನಡುಕ ಹುಟ್ಟಿಸಿದೆ. ಬಿಜೆಪಿಯ ಗೆಲುವನ್ನು ತಡೆಯಲು ಪ್ರಯತ್ನ ನಡೆದಿದೆ ಎಂದು ಟೀಕಿಸಿದೆ.
'ನಮ್ಮದೇ ಸರ್ಕಾರ': ಮೇಘಾಲಯದಲ್ಲಿ ಈ ಬಾರಿ ಬಿಜೆಪಿ ಸರ್ಕಾರ ರಚಿಸಲಿದೆ. ಚುನಾವಣೆಯಲ್ಲಿ 60 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ತೃಣಮೂಲ ಕಾಂಗ್ರೆಸ್ ಪಶ್ಚಿಮ ಬಂಗಾಳವನ್ನು ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ. ಮೇಘಾಲಯದಲ್ಲೂ ಅದು ಯಾವುದೇ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮಾಡಿಲ್ಲ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಹೇಳಿದರು. ಕಾಂಗ್ರೆಸ್ ಪಕ್ಷದ ನಾಯಕರು ಪಾದಯಾತ್ರೆಯಲ್ಲಿ ಕಾಣಸಿಗುತ್ತಾರೆಯೇ ಹೊರತು, ಚುನಾವಣೆ ಸಮಯದಲ್ಲಿ ಅಲ್ಲ. ಹೀಗಾಗಿ ಬಿಜೆಪಿ ಮೇಘಾಲಯದಲ್ಲಿ ಸರ್ಕಾರ ರಚನೆ ಮಾಡಲಿದೆ ಎಂದು ಪಕ್ಷದ ಪರ ಪ್ರಚಾರದ ವೇಳೆ ಹಿಮಂತ ಬಿಸ್ವಾ ಶರ್ಮಾ ಹೇಳಿದರು.
ಫೆಬ್ರವರಿ 27 ರಂದು ಮೇಘಾಲಯದಲ್ಲಿ 60 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಮಾರ್ಚ್ 2 ರಂದು ಫಲಿತಾಂಶ ಪ್ರಕಟವಾಗಲಿದೆ. ಎನ್ಪಿಪಿ, ಕಾಂಗ್ರೆಸ್ ಮತ್ತು ಬಿಜೆಪಿ ಏಕಾಂಗಿಯಾಗಿ ಕಣಕ್ಕೆ ಇಳಿಯುತ್ತಿವೆ. ಟಿಎಂಸಿ, ಯುಡಿಪಿ ಸೇರಿದಂತೆ ಹಲವು ಪಕ್ಷಗಳು ಚುನಾವಣಾ ಕಣದಲ್ಲಿವೆ. 2018ರ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಎರಡು ಸ್ಥಾನಗಳನ್ನು ಮಾತ್ರ ಗೆದ್ದಿತ್ತು.
ಇದನ್ನೂ ಓದಿ: 'ಸವಾಲುಗಳ ಮಧ್ಯೆ ಮುಖ್ಯಮಂತ್ರಿಯಾದೆ..': ಸಿಎಂ ಬಸವರಾಜ ಬೊಮ್ಮಾಯಿ