ಜೆಮ್ಶೆಡ್ಪುರ (ಜಾರ್ಖಂಡ್): ಜೆಮ್ ಶೆಡ್ಪುರದಿಂದ ಸುಮಾರು 20 ಕಿಲೋಮೀಟರ್ನಷ್ಟು ದೂರದ ಜಸ್ಕಂಡಿ ಗ್ರಾಮದಲ್ಲಿ ನೀರಿಗಾಗಿ ಹಾಹಾಕಾರ. ಇಲ್ಲಿನ ಅಂತರ್ಜಲ ಮಟ್ಟ ತೀರ ಕೇಳಮಟ್ಟಕ್ಕೆ ಇಳಿದಿತ್ತು. ಗಂಟೆಗಳ ಕಾಲ ಬೋರ್ವೆಲ್ ಮೂಲಕ ನೀರು ಎತ್ತಲು ಪ್ರಯತ್ನಿಸಿದರೂ ಅದ್ರಿಂದ ಪ್ರಯೋಜನವಾಗುವುದಿಲ್ಲ. ಬೇಸಿಗೆಯಲ್ಲಿ ಬಾವಿಗಳು ಒಣಗಿ, ಕುಡಿಯುವ ನೀರಿಗಾಗಿ ಜನ ಇನ್ನಿಲ್ಲದ ಸಮಸ್ಯೆ ಎದುರಿಸಿದ್ದರು. ಇದಾದ ಬಳಿಕ ನೀರಿನ ಮೌಲ್ಯ ಅರಿತ ಮಂದಿ ಜಲ ಸಂರಕ್ಷಣೆಯ ಪಣತೊಟ್ಟರು, ಇವರಿಗೆ ಕೈಜೋಡಿಸಿದ್ದು ಟಾಟಾ ಸ್ಟೀಲ್ ಗ್ರಾಮೀಣಾಭಿವೃದ್ಧಿ ಸೊಸೈಟಿ.
ಗ್ರಾಮದಲ್ಲಿ ನೀರಿನ ಮಹತ್ವ ಅರಿತ ಜನತೆ ಹನಿ ಹನಿ ನೀರು ಉಳಿಸಲು ಮುಂದೆ ಬಂದರು. ಟಾಟಾ ಸಹಯೋಗದೊಂದಿಗೆ ಮಳೆ ನೀರು ವ್ಯರ್ಥವಾಗದಂತೆ ತಡೆದು ಒಂದೆಡೆ ಸಂಗ್ರಹಿಸಲು ಯೋಚಿಸಿ ಯಶಸ್ವಿಯಾದರು.
ನೀರು ಸಂಗ್ರಹಿಸಲು ಮನೆಯ ಛಾವಣಿಗಳಿಗೆ ಪೈಪ್ಗಳ ಅಳವಡಿಸಲಾಯಿತು. ಇದರಿಂದ ಮಳೆ ಬಂದಾಗ ನೀರು ಪೈಪ್ ಮೂಲಕ ಕೊಳವೆ ಬಾವಿ, ಬೋರ್ವೆಲ್ ಹೊಂಡಗಳಿಗೆ ಹೋಗುವಂತೆ ಮಾಡಿದ್ದಾರಲ್ಲದೆ. ಮಳೆ ನೀರು ಕೊಯ್ಲು ಹೊಂಡಗಳಿಗೆ ಇಂಗುವಂತಹ ವ್ಯವಸ್ಥೆ ಮಾಡಿದ್ದಾರೆ. ಈ ರೀತಿ ಮಳೆ ನೀರು ವ್ಯರ್ಥವಾಗಿ ನದಿ ಸೇರುವ ಬದಲು ಇಂಗುಗುಂಡಿಗಳ ಸೇರಿ ಭವಿಷ್ಯದ ಬಳಕೆಗೆ ಲಭ್ಯವಾಗುವುದಲ್ಲದೇ, ಅಂತರ್ಜಲ ಮಟ್ಟವೂ ಏರಿಕೆಯಾಗಿದೆ.
ಈ ವಿಧಾನ ಅಳವಡಿಸಲು ಒಂದು ಮನೆಗೆ ಸುಮಾರು 1 ಸಾವಿರ ರೂಪಾಯಿ ಖರ್ಚು ಮಾಡಲಾಗಿದೆ. ಇದಕ್ಕಾಗಿ ಟಾಟಾ ಸಂಸ್ಥೆ ಈ ಹಣ ಭರಿಸಿದೆ. ಜಸ್ಕಂಡಿಯಲ್ಲಿ ಸುಮಾರು 20 ಮನೆಗಳಿಗೆ ಈ ವ್ಯವಸ್ಥೆ ಮಾಡಲಾಗಿದೆ. ಆರಂಭದಲ್ಲಿ ಜನರು ಈ ವ್ಯವಸ್ಥೆಯಿಂದ ಹೆಚ್ಚಿನ ಉಪಯೋಗ ಪಡೆಯಲು ಸಾಧ್ಯವಾಗಲಿಲ್ಲ. ಆದರೆ, ಕಾಲ ಕಳೆದಂತೆ ಗ್ರಾಮದಲ್ಲಿ ನೀರಿನ ಅಭಾವ ಕಡಿಮೆಯಾಗಿದ್ದು, ಗ್ರಾಮದಲ್ಲೀಗ ಕೇವಲ 30 ಅಡಿಯಲ್ಲಿ ನೀರು ಸಿಗುತ್ತಿದೆ.
ಹನಿ ಹನಿ ಉಳಿಸುವ ಈ ಕಾರ್ಯದಿಂದಾಗಿ ಈಗ ಗ್ರಾಮದ ಮಹಿಳೆಯರು ನೀರಿಗಾಗಿ ಅಲೆಯಬೇಕಾಗಿಲ್ಲ. ಇವರಷ್ಟೇ ಅಲ್ಲ ಅಕ್ಕಪಕ್ಕದ ಹಳ್ಳಿಗರೂ ಸಹ ನೀರಿನ ಸಮಸ್ಯೆಯಾದರೆ ಈ ಗ್ರಾಮಕ್ಕೆ ಆಗಮಿಸಿ ನೀರು ಪಡೆಯುತ್ತಾರೆ. ಜೊತೆಗೆ ಹಲವರು ಈ ವ್ಯವಸ್ಥೆ ಬಗ್ಗೆ ಮಾಹಿತಿ ಪಡೆದು ನೀರು ಉಳಿಸುವ ಕಾರ್ಯಕ್ಕೆ ಮೊದಲಾಗುತ್ತಿದ್ದಾರೆ.
ಪ್ರತಿಯೊಬ್ಬ ವ್ಯಕ್ತಿಯೂ ನೀರು ಉಳಿಸುವ ಕಡೆ ಒಂದು ಹೆಜ್ಜೆ ಇಟ್ಟರೆ ಭವಿಷ್ಯದಲ್ಲಿ ನೀರಿನ ಕೊರತೆ ಬಾಧಿಸದಂತೆ ಮಾಡಬಹುದು. ಪ್ರತೀ ಹಳ್ಳಿ, ಪಟ್ಟಣ ಇಂತಹ ಕಾರ್ಯಕ್ಕೆ ಮುಂದಾದರೆ ಇಡೀ ದೇಶದ ಚಿತ್ರಣ ಬದಲಿಸಬಹುದು. ಜೊತೆಗೆ ನೀರಿನ ಸಮಸ್ಯೆಯನ್ನ ಶಾಶ್ವತವಾಗಿ ನಿರ್ಮೂಲನೆ ಮಾಡಬಹುದು.